IND vs ENG: 3ನೇ ಟೆಸ್ಟ್‌ ಸೋಲಿಗೆ ಅವರೇ ಕಾರಣ! ಗಿಲ್ ಹೇಳಿದ್ದಾದ್ರೂ ಯಾರ ಬಗ್ಗೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಅಂಗಳದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಕೇವಲ 22 ರನ್‌ಗಳಿಂದ ಸೋಲನ್ನು ಕಂಡು ನಿರಾಸೆಯಾದರೂ, ಅವರ ಹೋರಾಟದ ಶಕ್ತಿ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದೆ. ಕೊನೆಯ ವಿಕೆಟ್‌ಗೆ ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ತೋರಿಸಿದ ತಾಳ್ಮೆ ಹಾಗೂ ದೃಢತೆ ಅಭೂತಪೂರ್ವವಾಗಿತ್ತು.

ಜಡೇಜಾ-ಬುಮ್ರಾ-ಸಿರಾಜ್ ಹೋರಾಟ ಮೆಚ್ಚುಗೆಗೆ ಪಾತ್ರ
ಒಂದು ಬದಿಯಲ್ಲಿ ಜಡೇಜಾ 181 ಎಸೆತಗಳಲ್ಲಿ 61 ರನ್ ಗಳಿಸಿ ಹೋರಾಟ ಮುಂದುವರೆಸಿದರೆ, ಬುಮ್ರಾ 54 ಎಸೆತಗಳನ್ನು ಎದುರಿಸಿ, ಸಿರಾಜ್ 30 ಎಸೆತಗಳನ್ನು ಆಡಿದರು. ಈ ಜೋಡಿ ಸುಮಾರು 14 ಓವರ್‌ಗಳ ಕಾಲ ಇಂಗ್ಲೆಂಡ್ ಬೌಲರ್‌ಗಳನ್ನು ಕಾಡಿ ಭಾರತಕ್ಕೆ ಜಯದ ಕನಸು ಹುಟ್ಟಿಸಿದರು. ಅಂತಿಮ ಕ್ಷಣಗಳಲ್ಲಿ ಈ ಹೋರಾಟ ವಿಫಲವಾದರೂ, ಅವರ ಹಟದ ಆಟ ಮೆಚ್ಚುಗೆಗೆ ಪಾತ್ರವಾಯಿತು.

ತಂಡದ ಮೇಲೆ ಹೆಮ್ಮೆ ವ್ಯಕ್ತಪಡಿಸಿದ ನಾಯಕ ಗಿಲ್
ಪಂದ್ಯದ ನಂತರ ಮಾತನಾಡಿದ ನಾಯಕ ಶುಭಮನ್ ಗಿಲ್, “ಈ ಸೋಲು ನಿರಾಸೆ ತಂದರೂ, ನನ್ನ ತಂಡದ ಪ್ರದರ್ಶನದ ಬಗ್ಗೆ ಹೆಮ್ಮೆ ಇದೆ. ಕೊನೆಯ ಸೆಷನ್‌ನವರೆಗೂ ಹೋರಾಡಿದ ಆಟಗಾರರನ್ನು ಮೆಚ್ಚಿದೆ,” ಎಂದು ಅಭಿಪ್ರಾಯಪಟ್ಟರು. ಜೊತೆಗೆ, ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಂದ ಹೆಚ್ಚಿನ ಜೊತೆಯಾಟ ಸಿಕ್ಕಿದ್ದರೆ ಫಲಿತಾಂಶ ಬೇರೆಯಾಗಿರುತ್ತಿತ್ತಾದರೂ, ಇಂಗ್ಲೆಂಡ್ ಬೌಲರ್‌ಗಳ ಪ್ರಭಾವಿ ದಾಳಿ ನಮ್ಮ ಸೋಲಿಗೆ ಕಾರಣ ಎಂದು ಗಿಲ್ ಪ್ರಾಮಾಣಿಕವಾಗಿ ಒಪ್ಪಿಕೊಂಡರು.

ಜಡೇಜಾರನ್ನು ಹೊಗಳಿದ ಗಿಲ್, “ಅವರು ಅನುಭವಿ ಆಟಗಾರ. ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಜೊತೆಗಿಟ್ಟುಕೊಂಡು ಉತ್ತಮವಾಗಿ ಆಡಿದರು. ಅವರಿಗೆ ಸಂದೇಶ ನೀಡಬೇಕಾದ ಅಗತ್ಯವೇ ಇರಲಿಲ್ಲ,” ಎಂದು ಹೇಳಿದರು.

ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 80–100 ರನ್‌ಗಳ ಮುನ್ನಡೆ ಭಾರತ ಪಡೆದುಕೊಂಡಿದ್ದರೆ ಪಂದ್ಯ ತಿರುಗಿಬಿಡಬಹುದಿತ್ತು ಎಂಬ ಅಭಿಪ್ರಾಯವನ್ನು ಗಿಲ್ ವ್ಯಕ್ತಪಡಿಸಿದರು. “ಸ್ಕೋರ್‌ಕಾರ್ಡ್‌ ಯಾವಾಗಲೂ ತಂಡದ ಕಠಿಣ ಪರಿಶ್ರಮವನ್ನೋ ಅಥವಾ ಉತ್ತಮ ಆಟವನ್ನೋ ತೋರಿಸುವುದಿಲ್ಲ. ನಾವು ಉತ್ತಮ ಕ್ರಿಕೆಟ್ ಆಡಿದ್ದೇವೆ. ಮುಂದಿನ ಪಂದ್ಯಗಳು ಇನ್ನೂ ರೋಚಕವಾಗುತ್ತವೆ,” ಎಂಬ ವಿಶ್ವಾಸವಿರುವ ಗಿಲ್, ಬುಮ್ರಾ ಲಭ್ಯತೆ ಬಗ್ಗೆ ನಿಗೂಢವಾಗಿ ಉತ್ತರಿಸಿದರೂ, ತಂಡದ ಹೋರಾಟ ಮುಂದಿನ ಪಂದ್ಯಗಳಲ್ಲಿ ಫಲ ನೀಡಲಿದೆ ಎಂಬ ನಂಬಿಕೆ ಅಭಿಮಾನಿಗಳಲ್ಲಿ ಮೂಡಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!