March 19, 2026
Thursday, March 19, 2026
spot_img

ಪಾಕಿಸ್ತಾನವನ್ನು ಸದೆಬಡಿದು ಜೈಹೋ ಎಂದ ಭಾರತ ‘ಎ’ ತಂಡ: 8 ವಿಕೆಟ್‌ಗಳ ಭರ್ಜರಿ ಜಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವುಮೆನ್ ಎಮರ್ಜಿಂಗ್ ಏಷ್ಯಾ ಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ‘ಎ’ ತಂಡ ಅಕ್ಷರಶಃ ರಣಕೇಸರಿಯಂತೆ ಘರ್ಜಿಸಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಅದ್ಭುತ ಪ್ರಾಬಲ್ಯ ಮೆರೆದ ಭಾರತೀಯ ವನಿತೆಯರು 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ತಂಡಕ್ಕೆ ಭಾರತದ ಬೌಲರ್‌ಗಳು ಆರಂಭದಿಂದಲೇ ಆಘಾತ ನೀಡಿದರು. ಸೈಮಾ ಠಾಕೂರ್, ನಾಯಕಿ ರಾಧಾ ಯಾದವ್ ಮತ್ತು ಪ್ರೇಮಾ ರಾವತ್ ಅವರ ಶಿಸ್ತುಬದ್ಧ ದಾಳಿಗೆ ನಲುಗಿದ ಪಾಕಿಸ್ತಾನ, 18.5 ಓವರ್‌ಗಳಲ್ಲಿ ಕೇವಲ 93 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕುಸಿಯಿತು. ಈ ಮೂವರು ಬೌಲರ್‌ಗಳು ತಲಾ 2 ವಿಕೆಟ್ ಪಡೆಯುವ ಮೂಲಕ ಪಾಕ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು.

ಕಡಿಮೆ ಮೊತ್ತದ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ದಿನೇಶ್ ವೃಂದಾ ಸ್ಪೋಟಕ ಆರಂಭ ನೀಡಿದರು. ಮೈದಾನದ ಮೂಲೆ ಮೂಲೆಗೂ ಬೌಂಡರಿ ಬಾರಿಸಿದ ವೃಂದಾ, ಕೇವಲ 29 ಎಸೆತಗಳಲ್ಲಿ 55 ರನ್ (12 ಬೌಂಡರಿ) ಸಿಡಿಸಿ ಅಜೇಯರಾಗಿ ಉಳಿದರು. ಇವರಿಗೆ ಉತ್ತಮ ಸಾಥ್ ನೀಡಿದ ಅನುಷ್ಕಾ ಶರ್ಮಾ 24 ರನ್ ಬಾರಿಸಿದರು.

ಭಾರತದ ಪಾರಮ್ಯ ಎಷ್ಟಿತ್ತೆಂದರೆ, ಇನ್ನೂ 59 ಎಸೆತಗಳು ಬಾಕಿ ಇರುವಂತೆಯೇ 2 ವಿಕೆಟ್ ನಷ್ಟಕ್ಕೆ 97 ರನ್ ಗಳಿಸಿ ಗುರಿ ತಲುಪಿತು. ಈ ಗೆಲುವಿನ ಮೂಲಕ ಭಾರತ ತಂಡ ಟೂರ್ನಿಯಲ್ಲಿ ತನ್ನ ಬಲಿಷ್ಠ ಅಸ್ತಿತ್ವವನ್ನು ಸಾಬೀತುಪಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !