ಹೊಸದಿಗಂತ ಡಿಜಿಟಲ್ ಡೆಸ್ಕ್:
ರಕ್ಷಣಾ ಉತ್ಪಾದನೆಯಲ್ಲಿ 2025 ರ ವೇಳೆಗೆ 22 ಶತಕೋಟಿ ಡಾಲರ್ ವಹಿವಾಟು ಸಾಧಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಹೇಳಿದ್ದಾರೆ. ಗುಜರಾತ್ ರಾಜಧಾನಿ ಗಾಂಧಿನಗರದಲ್ಲಿ ನಡೆಯುತ್ತಿರುವ ಡಿಫೆನ್ಸ್ ಎಕ್ಸ್‌ಪೋ 2022 ರ ಭಾಗವಾಗಿ ‘ರಕ್ಷಣೆಯಲ್ಲಿ ಹೂಡಿಕೆ’ ಕಾರ್ಯಕ್ರಮದಲ್ಲಿ ಮಾತನಾದಿಎ ಅವರು ಭಾರತೀಯ ರಕ್ಷಣಾ ಉದ್ಯಮದಲ್ಲಿ ಹೂಡಿಕೆ ಮಾಡಲು ಮುಂದೆ ಬರುವಂತೆ ಖಾಸಗಿ ಕಂಪನಿಗಳಿಗೆ ಮನವಿ ಮಾಡಿದ್ದಾರೆ.
ಭಾರತದ ರಕ್ಷಣಾ ಉದ್ಯಮವು ಮಹತ್ವದ ಘಟ್ಟದಲ್ಲಿದೆ. ದೊಡ್ಡ ಕಾರ್ಪೊರೇಟ್‌ಗಳು ಮಾತ್ರವಲ್ಲ, ಸ್ಟಾರ್ಟ್‌ಅಪ್‌ಗಳು ಮತ್ತು ಎಂಎಸ್‌ಎಂಇಗಳು (ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳು) ಈಗ ರಕ್ಷಣಾ ವಲಯದೊಂದಿಗೆ ಸಂಬಂಧ ಹೊಂದಿವೆ. ರಕ್ಷಣಾ ಕ್ಷೇತ್ರಕ್ಕೆ ಇದು ಸುವರ್ಣ ಕಾಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
“2025 ರ ವೇಳೆಗೆ ದೇಶೀಯ ರಕ್ಷಣಾ ಉತ್ಪಾದನೆಯನ್ನು ಪ್ರಸ್ತುತ 12 ಶತಕೋಟಿಡಾಲರ್ ನಿಂದ 22 ಶತಕೋಟಿ ಡಾಲರ್ ಗೆ ವಿಸ್ತರಿಸಲು ಸರ್ಕಾರವು ಪ್ರಯತ್ನಗಳನ್ನು ಮಾಡುತ್ತಿದೆ. ರಕ್ಷಣಾ ಕ್ಷೇತ್ರದಲ್ಲಿ ಅವಕಾಶಗಳ ಕೊರತೆ ಇಲ್ಲ. ಈ ವಲಯದಲ್ಲಿ ವಿಶ್ವದ ಬೇಡಿಕೆಗಳನ್ನು ಈಡೇರಿಸುವಲ್ಲಿ ಭಾರತ ಮುನ್ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ರಕ್ಷಣಾ ವಲಯದಲ್ಲಿ ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸಲು ಕೇಂದ್ರವು ಹಲವಾರು ಕ್ರಮಗಳನ್ನು ಕೈಗೊಂಡಿದೆ ಮತ್ತು ಅನೇಕ ಸುಧಾರಣೆಗಳನ್ನು ಜಾರಿಗೆ ತಂದಿದೆ ಎಂದು ಸಿಂಗ್ ಹೇಳಿದ್ದಾರೆ. “ಹಿಂದೆ, ರಕ್ಷಣಾ ಸಚಿವಾಲಯದ ಬಾಗಿಲುಗಳು ಖಾಸಗಿಯವರಿಗೆ ಮುಚ್ಚಲ್ಪಟ್ಟಿದ್ದವು. ರಕ್ಷಣಾ ಮಂತ್ರಿಗಳು ಮತ್ತು ಸಚಿವಾಲಯದ ಅಧಿಕಾರಿಗಳು ಹೂಡಿಕೆದಾರರನ್ನು ಭೇಟಿಯಾಗುವುದನ್ನು ತಪ್ಪಿಸುತ್ತಿದ್ದರು, ಆದರೆ ಈಗ ನಿಮಗಾಗಿ ನಮ್ಮ ಬಾಗಿಲು ಯಾವಾಗಲೂ ತೆರೆದಿರುತ್ತದೆ, ”ಎಂದು ಅವರು ಹೇಳಿದ್ದಾರೆ.
ದೇಶದ ರಕ್ಷಣೆ ಮತ್ತು ಆರ್ಥಿಕ ಶಕ್ತಿಯು ಒಂದಕ್ಕೊಂದು ಪೂರಕವಾಗಿರುತ್ತದೆ ಮತ್ತು ಬೆದರಿಕೆಗಳಿಂದ ಅವುಗಳಿಗೆ ರಕ್ಷಣೆ ಒದಗಿಸಿದರೆ ರಾಷ್ಟ್ರವು ಹೆಚ್ಚು ಪ್ರಗತಿ ಹೊಂದುತ್ತದೆ ಎಂದು ಅವರು ಸಭೆಯನ್ನುದ್ದೇಶಿಸಿ ಹೇಳಿದರು. “ರಕ್ಷಣೆ ಮತ್ತು ಅಭಿವೃದ್ಧಿ ಎರಡು ವಿರುದ್ಧ ಧ್ರುವಗಳು ಎಂಬ ನಂಬಿಕೆ ಬಹಳ ಹಿಂದಿನಿಂದಲೂ ಇತ್ತು. ಇದರರ್ಥ ನಾವು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯತ್ತ ಗಮನ ಹರಿಸಿದರೆ, ನಮ್ಮ ರಕ್ಷಣಾ ಸಾಮರ್ಥ್ಯಗಳಲ್ಲಿ ನಾವು ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಈಗ, ಕಳೆದ ಕೆಲವು ವರ್ಷಗಳಲ್ಲಿ ದೇಶವು ಆ ಕಲ್ಪನೆಯಿಂದ ಹೊರಬಂದಿರುವುದು ನನಗೆ ಖುಷಿ ತಂದಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.