ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದಲ್ಲಿ ಹಿಂದುಗಳ ನರಮೇಧ ನಡೆಯುತ್ತಿದೆ. ತಿಂಗಳಲ್ಲಿ ಅಲ್ಲಿನ 6 ಅಲ್ಪಸಂಖ್ಯಾತರನ್ನು ಹತ್ಯೆ ಮಾಡಲಾಗಿದೆ. ಎರಡೂ ದೇಶಗಳ ನಡುವೆ ಸದ್ಯ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಇಷ್ಟೆಲ್ಲ ಬಿಕ್ಕಟ್ಟಿನ ನಡುವೆಯೂ ಭಾರತ ಮಾನವೀಯತೆ ಮೆರೆಯುವಂತಹ ಕೆಲಸವನ್ನು ಮಾಡಿದೆ.
ಬಾಂಗ್ಲಾದೇಶದ ಪ್ರಜೆಯನ್ನು ವಿವಾಹವಾಗಿ, ಅಲ್ಲಿಯೇ ಉಳಿದುಕೊಂಡಿರುವ ಪಶ್ಚಿಮಬಂಗಾಳದ ಮಹಿಳೆಯೊಬ್ಬರ ತಂದೆ ಮೃತಪಟ್ಟಿದ್ದಾರೆ. ಹೆತ್ತಪ್ಪನಿಗೆ ಅಂತಿಮ ವಿದಾಯ ಹೇಳಲು ಬಯಸಿದ್ದ ಮಗಳಿಗೆ ಭಾರತಕ್ಕೆ ಬರಲು ಅವಕಾಶವಿಲ್ಲ. ಆದರೆ, ದೇಶದ ಗಡಿ ಕಾವಲು ಕಾಯುವ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಆಕೆಗೆ ಮಾನವೀಯ ಆಧಾರದ ಮೇಲೆ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟು ಉದಾರತೆ ಮೆರೆದಿದೆ.
ಪಶ್ಚಿಮಬಂಗಾಳದ ನಾಡಿಯಾ ಜಿಲ್ಲೆಯ ಚಾಪ್ರಾ ಪ್ರದೇಶದ ಹತ್ಖೋಲಾ ಗ್ರಾಮದ ನಿವಾಸಿ ಇಸ್ರಾಫಿಲ್ ಹಲ್ಸೋನಾ ಮೃತಪಟ್ಟಿದ್ದಾರೆ. ಆಕೆಯ ಮಗಳು ಬಾಂಗ್ಲಾದೇಶದ ಚುವಾಡಂಗಾ ಜಿಲ್ಲೆಯ ಕುತುಬ್‌ಪುರ ಗ್ರಾಮದ ವ್ಯಕ್ತಿಯನ್ನು ವಿವಾಹವಾಗಿ ಅಲ್ಲಿಯೇ ಇದ್ದರು. ಶತಾಯುಷಿ ತಂದೆಯ ಮರಣದ ಸುದ್ದಿ ತಲುಪಿದಾಗ, ಆಕೆ ಕೊನೆಯ ಬಾರಿಗೆ ನೋಡುವ ಬಯಕೆ ವ್ಯಕ್ತಪಡಿಸಿದರು. ಫೋನ್ ಮೂಲಕ ಈ ಮಾಹಿತಿ ನೀಡಿದ್ದಾರೆ.
ಬಳಿಕ, ಕುಟುಂಬಸ್ಥರು ಇದನ್ನು ಹತ್ಖೋಲಾ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅವರು, ಬಿಎಸ್‌ಎಫ್‌ನ 101 ನೇ ಬೆಟಾಲಿಯನ್ ಅನ್ನು ಸಂಪರ್ಕಿಸಿದ್ದಾರೆ. ಸೂಕ್ಷ್ಮತೆ ಅರಿತ ಬಿಎಸ್‌ಎಫ್ ಬಾಂಗ್ಲಾದೇಶದ ಗಡಿ ಕಾವಲು ಪಡೆಯಾದ ಬಿಜಿಬಿಗೆ ತಿಳಿಸಿದೆ. ಉಭಯ ಸೇನೆಗಳ ನಡುವೆ ಮಾತುಕತೆ ನಡೆದ ಬಳಿಕ, ಗಡಿಯ ಶೂನ್ಯ ಬಿಂದುವಿನಲ್ಲಿ ಶವವನ್ನು ತಂದು ಅಂತ್ಯಕ್ರಿಯೆ ನಡೆಸಲಾಗಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡ ಹತ್ಖೋಲಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಅತಿಹರ್ ಹಲ್ಸೋನಾ, ಶತಾಯುಷಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಅವರ ಹೆಣ್ಣುಮಕ್ಕಳಲ್ಲಿ ಒಬ್ಬರು ಬಾಂಗ್ಲಾದೇಶದ ವ್ಯಕ್ತಿಯನ್ನು ವಿವಾಹವಾಗಿದ್ದಾರೆ. ಅವರು ತಂದೆಗೆ ಅಂತಿಮ ವಿದಾಯ ಹೇಳಲು ಬಯಸಿದ್ದರು. ನಾವು ಬಿಎಸ್‌ಎಫ್ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ತಿಳಿಸಿದೆವು. ನಂತರ, ಬಿಎಸ್‌ಎಫ್ ಮತ್ತು ಬಾಂಗ್ಲಾ ಸೇನೆಯ ನಡುವೆ ಸಭೆಯ ನಂತರ ಮಹಿಳೆಗೆ ಅಂತಿಮ ನಮನ ಸಲ್ಲಿಸಲು ಮತ್ತು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅನುಮತಿ ನೀಡಲಾಯಿತು. ಇಡೀ ಪ್ರಕ್ರಿಯೆಯಲ್ಲಿ ಬಿಎಸ್‌ಎಫ್ ನೇತೃತ್ವ ವಹಿಸಿತ್ತು ಎಂದು ತಿಳಿಸಿದ್ದಾರೆ.

