ಫ್ರಾನ್ಸ್‌ನಲ್ಲಿ ಭಾರತದ ಯುಪಿಐ ಬಳಕೆಗೆ ಒಪ್ಪಂದ: ಪ್ರಧಾನಿ ಮೋದಿ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದ ಅತ್ಯಂತ ಯಶಸ್ವಿ ಆನ್​ಲೈನ್​ ಪಾವತಿ ವ್ಯವಸ್ಥೆ ಯೂನಿಫೈಡ್​ ಪೇಮೆಂಟ್​ ಸಿಸ್ಟಮ್​ (ಯುಪಿಐ) ಅನ್ನು ಫ್ರಾನ್ಸ್​ನಲ್ಲೂ ಬಳಕೆ ಮಾಡಲು ಭಾರತ ಮತ್ತು ಫ್ರಾನ್ಸ್‌ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ.

ಎರಡು ದಿನಗಳ ಫ್ರಾನ್ಸ್​ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಅನೇಕ ವಿಚಾರಗಳ ಕುರಿತು ಚರ್ಚೆ ನಡೆಸಿದರು. ಈ ವೇಳೆ ಯುಪಿಐ ಪಾವತಿ ಬಗ್ಗೆಯೂ ಮಾತುಕತೆ ನಡೆಸಿದ್ದಾರೆ. ಈ ಒಪ್ಪಂದದ ಮೂಲದ ಫ್ರಾನ್ಸ್‌ನಲ್ಲಿರುವ ಭಾರತೀಯ ಪ್ರವಾಸಿಗರು ಮುಂದಿನ ದಿನಗಳಲ್ಲಿ ರೂಪಾಯಿಗಳಲ್ಲಿ ವ್ಯವಹಾರ ಮಾಡಲು ಸಾಧ್ಯವಾಗುತ್ತದೆ. ಇದು ಐಫೆಲ್ ಟವರ್‌ನಿಂದ ಪ್ರಾರಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಪ್ಯಾರಿಸ್‌ನ ಲಾ ಸೀನ್ ಮ್ಯೂಸಿಕೇಲ್‌ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಭಾರತದ UPI ಅಥವಾ ಇತರೆ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ದೇಶದಲ್ಲಿ ದೊಡ್ಡ ಸಾಮಾಜಿಕ ಪರಿವರ್ತನೆಯನ್ನು ತಂದಿವೆ. ಡಿಜಿಟಲ್‌ ಮೂಲಸೌಕರ್ಯ ಬಳಕೆಗೆ ಸಂಬಂಧಿಸಿದಂತೆ ಭಾರತ ಮತ್ತು ಫ್ರಾನ್ಸ್ ಒಟ್ಟಿಗೆ ಕೆಲಸ ಮಾಡಲು ಮುಂದಾಗಿದ್ದು, ಫ್ರಾನ್ಸ್‌ನಲ್ಲಿ UPI ಬಳಸಲು ಒಪ್ಪಿಕೊಂಡು ಒಪ್ಪಂದ ಮಾಡಿಕೊಳ್ಳಲಾಗಿದೆ. ಹೀಗಾಗಿ, ಭಾರತೀಯ ಪ್ರವಾಸಿಗರು ಈಗ ಯುಪಿಐ ಮೂಲಕ ಐಫೆಲ್ ಟವರ್‌ನಲ್ಲಿ ರೂಪಾಯಿಗಳಲ್ಲಿ ಪಾವತಿ ಮಾಡಲು ಸಾಧ್ಯವಾಗುತ್ತದೆ” ಎಂದು ಹೇಳಿದರು.

“2022ರಲ್ಲೇ NPCI ಫ್ರಾನ್ಸ್‌ನ ವೇಗದ ಮತ್ತು ಸುರಕ್ಷಿತ ಆನ್‌ಲೈನ್ ಪಾವತಿ ವ್ಯವಸ್ಥೆ ಲೈರಾ ಜತೆ ಒಪ್ಪಂದಕ್ಕೆ ಸಹಿ ಹಾಕಿತು. ಈ ವರ್ಷ ಭಾರತದ UPI ಮತ್ತು ಸಿಂಗಾಪುರದ PayNow ಒಪ್ಪಂದಕ್ಕೆ ಸಹಿ ಹಾಕಿವೆ. ಎರಡೂ ದೇಶಗಳ ಬಳಕೆದಾರರಿಗೆ ಗಡಿಯಾಚೆಗಿನ ವಹಿವಾಟುಗಳನ್ನು ಮಾಡಲು ಅವಕಾಶ ಮಾಡಿಕೊಡಲಾಗಿದೆ. ಈಗಾಗಲೇ ಯುಎಇ, ಭೂತಾನ್ ಮತ್ತು ನೇಪಾಳ ಯುಪಿಐ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ. ಇದೀಗ ಫ್ರಾನ್ಸ್ ಜೊತೆಗಿನ ಈ ಒಪ್ಪಂದವು ಸಹ ಭಾರತ ಮತ್ತು ಫ್ರಾನ್ಸ್ ನಡುವಿನ ದ್ವಿಪಕ್ಷೀಯ ವ್ಯಾಪಾರ ಮತ್ತು ಪ್ರವಾಸೋದ್ಯಮ ಬೆಳವಣಿಗೆಗೆ ಅನುಕೂಲವಾಗಲಿದೆ. ಡಿಜಿಟಲ್ ಮೂಲಸೌಕರ್ಯವು ಎರಡು ದೇಶಗಳ ನಡುವಿನ ಸಂಬಂಧವನ್ನು ಬಲಪಡಿಸುತ್ತದೆ. ಭಾರತ ಮತ್ತು ಫ್ರಾನ್ಸ್ ದೀರ್ಘಕಾಲದಿಂದ ಪುರಾತತ್ವ ಕಾರ್ಯಾಚರಣೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ” ಎಂದು ಪ್ರಧಾನಿ ಮಾತನಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!