ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಗೆದ್ದು ಫೈನಲ್ ಗೆ ಪ್ರವೇಶ ಪಡೆದಿದೆ.
ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 264 ರನ್ ಕಲೆಹಾಕಿತು. ಇದನ್ನು ಬೆನ್ನಟ್ಟಿದ ರೋಹಿತ್ ಪಡೆ 6 ವಿಕೆಟ್ ನಷ್ಟಕ್ಕೆ 267 ರನ್ ಗಳಿಸಿ ಗೆಲುವಿನ ದಡ ಸೇರಿದೆ. ಈ ಮೂಲಕ ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್ ಸೋಲಿನ ಸೇಡು ತೀರಿಸಿಕೊಂಡು ಫೈನಲ್ ಗೆ ಪ್ರವೇಶಿಸಿದೆ.
ಆರಂಭದಲ್ಲಿ ಟೀಂ ಇಂಡಿಯಾ ಎಡವಿತ್ತು. ಕಾರಣ ಶುಬಮನ್ ಗಿಲ್ ಆರಂಭದಲ್ಲೇ ವಿಕೆಟ್ ಕೈಚೆಲ್ಲಿದ್ದರು. ಕೇವಲ 8 ರನ್ ಸಿಡಿಸಿ ಗಿಲ್ ಔಟಾಗಿದ್ದರು. ರೋಹಿತ್ ಆಟ 28 ರನ್‌ಗೆ ಅಂತ್ಯಗೊಂಡಿತ್ತು. 43 ರನ್‌ಗೆ ಭಾರತ 2 ವಿಕೆಟ್ ಕಳೆದುಕೊಂಡಿತ್ತು.
ಈ ವೇಳೆ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಪಂದ್ಯದ ಗತಿ ಬದಲಿಸಿದರು. ಶ್ರೇಯಸ್ ಅಯ್ಯರ್ 45 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಈ ವೇಳೆ ಭಾರತ ಕುಸಿತ ಕಂಡರೂ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಭಾರತದ ಆತ್ಮವಿಶ್ವಾಸ ಹೆಚ್ಚಿಸಿತ್ತು. ಆಕ್ಸರ್ ಪಟೇಲ್ 27 ರನ್ ಕಾಣಿಕೆ ನೀಡಿ ನಿರ್ಗಮಿಸಿದ್ದರು. ಕೆಎಲ್ ರಾಹುಲ್ ಜೊತೆ ಸೇರಿದ ವಿರಾಟ್ ಕೊಹ್ಲಿ ಅಬ್ಬರಿಸಿದರು. ಕೊಹ್ಲಿ 84 ರನ್ ಸಿಡಿಸಿ ನಿರ್ಗಮಿಸಿದ್ದರು. ಬಳಿಕ ಜೊತೆಯಾದ ಕೆಎಲ್ ರಾಹುಲ್ ಔಟಾಗದೇ 42 ರನ್, ಹಾರ್ದಿಕ್ ಪಾಂಡ್ಯ 28 ರನ್ ಹೊಡೆಯುವ ಮೂಲಕ ಭಾರತದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದರು.