October 15, 2026
Thursday, October 15, 2026
spot_img

ಇರಾನ್-ಇಸ್ರೇಲ್ ಕದನ ವಿರಾಮಕ್ಕೆ ಭಾರತದ ಜೈಕಾರ: ಜಾಗತಿಕ ಆರ್ಥಿಕತೆಗೆ ಸಿಕ್ಕಿತು ಬಿಗ್ ರಿಲೀಫ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಏಷ್ಯಾದಲ್ಲಿ ಅಶಾಂತಿ ಸೃಷ್ಟಿಸಿದ್ದ ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷಕ್ಕೆ ಕೊನೆಗೂ ಬ್ರೇಕ್ ಬಿದ್ದಿದ್ದು, ಈ ಬೆಳವಣಿಗೆಯನ್ನು ಭಾರತ ಮುಕ್ತಕಂಠದಿಂದ ಸ್ವಾಗತಿಸಿದೆ. ಈ ಕದನ ವಿರಾಮವು ಕೇವಲ ತಾತ್ಕಾಲಿಕವಲ್ಲದೆ, ಈ ಭಾಗದಲ್ಲಿ ಶಾಶ್ವತ ಶಾಂತಿಗೆ ಮುನ್ನುಡಿ ಬರೆಯಲಿ ಎಂದು ಭಾರತ ಭರವಸೆ ವ್ಯಕ್ತಪಡಿಸಿದೆ.

ಯಾವುದೇ ಬಿಕ್ಕಟ್ಟನ್ನು ನಿರಂತರ ಸಂವಾದ ಮತ್ತು ಚರ್ಚೆಗಳ ಮೂಲಕವೇ ಬಗೆಹರಿಸಿಕೊಳ್ಳಬೇಕು ಎಂಬ ತನ್ನ ನಿಲುವನ್ನು ಭಾರತ ಪುನರುಚ್ಚರಿಸಿದೆ.

ಯುದ್ಧದ ಕಾರಣದಿಂದ ಮುಗ್ಧ ಜನರು ಅನುಭವಿಸಿದ ಸಂಕಷ್ಟಗಳು ಹಾಗೂ ಜಾಗತಿಕ ಇಂಧನ ಪೂರೈಕೆ ಮೇಲೆ ಬಿದ್ದಿದ್ದ ಹೊಡೆತದ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ.

ಕದನ ವಿರಾಮ ಘೋಷಣೆಯಿಂದಾಗಿ ಅತ್ಯಂತ ಮಹತ್ವದ ಹಾರ್ಮುಜ್ ಜಲಸಂಧಿಯ ಮೂಲಕ ಅಡೆತಡೆಯಿಲ್ಲದೆ ಸರಕು ಸಾಗಣೆಗೆ ಹಾದಿ ಸುಗಮವಾಗಿದೆ. ಇದು ಜಾಗತಿಕ ಆರ್ಥಿಕತೆಯ ದೃಷ್ಟಿಯಿಂದ ಅತ್ಯಂತ ಸಮಾಧಾನಕರ ಸಂಗತಿ.

ಯುದ್ಧ ಪೀಡಿತ ಪ್ರದೇಶದಲ್ಲಿ ಶಾಂತಿ ನೆಲೆಸಲು ಅಂತರರಾಷ್ಟ್ರೀಯ ಸಮುದಾಯ ತೋರುತ್ತಿರುವ ಬೆಂಬಲಕ್ಕೆ ಭಾರತವು ಧ್ವನಿಗೂಡಿಸಿದ್ದು, ಪ್ರಾದೇಶಿಕ ಸ್ಥಿರತೆಯೇ ಸರ್ವರ ಅಭಿವೃದ್ಧಿಗೆ ಪೂರಕ ಎಂದು ಒತ್ತಿಹೇಳಿದೆ.

Must Read