ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಚೈನಾ ನಡುವಿನ ಗಡಿ ಪ್ರಶ್ನೆಯ ಕುರಿತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೈನಾ ವಿದೇಶಾಂಗ ಸಚಿವ ವಾಂಗ್ ಯಿ ನೇತೃತ್ವದ 24 ನೇ ಸುತ್ತಿನ ವಿಶೇಷ ಪ್ರತಿನಿಧಿಗಳ ಸಂವಾದ ದೆಹಲಿಯಲ್ಲಿಂದು ಆರಂಭವಾಗಿದೆ.
ಈ ಸಭೆಯು ಗಡಿ ಪರಿಸ್ಥಿತಿ, ವ್ಯಾಪಾರ ಮತ್ತು ಉಭಯ ರಾಷ್ಟ್ರಗಳ ನಡುವಿನ ವಿಮಾನ ಸೇವೆಗಳ ಪುನರಾರಂಭ ಸೇರಿದಂತೆ ಹಲವಾರು ವಿಷಯಗಳನ್ನು ಒಳಗೊಳ್ಳಲಿದೆ. ಟಿಯಾಂಜಿನ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಈ ತಿಂಗಳ ಕೊನೆಯಲ್ಲಿ ಚೈನಾಕ್ಕೆ ಭೇಟಿ ನೀಡುವ ಮುನ್ನ ಈ ಸಭೆ ನಡೆಯುತ್ತಿದೆ.
ಸಭೆಯಲ್ಲಿ ಅಜಿತ್ ದೋವಲ್, ಉಭಯ ದೇಶಗಳ ಗಡಿಗಳು ಶಾಂತಿ ಮತ್ತು ನೆಮ್ಮದಿಯಿಂದ ಇದ್ದು, ದ್ವಿಪಕ್ಷೀಯ ಸಂಬಂಧಗಳು ಹೆಚ್ಚು ಗಣನೀಯವಾಗಿವೆ ಎಂದರು. ಕಳೆದ ಅಕ್ಟೋಬರ್‌ನಲ್ಲಿ ಬ್ರಿಕ್ಸ್ ಕಜಾನ್ ಶೃಂಗಸಭೆಯ ಬಳಿಕ ಭಾರತ ಮತ್ತು ಚೈನಾ ಪರಸ್ಪರ ಸಹಕಾರದಲ್ಲಿ ಹೊಸ ಅಧ್ಯಾಯ ಬರೆದಿದೆ. ಇಂಥ ಒಂದು ಹೊಸ ಪ್ರವೃತ್ತಿಯನ್ನು ಸ್ಥಾಪಿಸಲು ಸಾಧ್ಯವಾದ ನಾಯಕರಿಗೆ ನಾವು ಅತ್ಯಂತ ಕೃತಜ್ಞರಾಗಿರುತ್ತೇವೆ ಎಂದರು. ಈ ಸಭೆಯ ಬಳಿಕ ಉಭಯ ದೇಶಗಳ ನಡುವೆ ಸೃಷ್ಟಿಯಾಗಿರುವ ಹೊಸ ವಾತಾವರಣವು ಎರಡೂ ದೇಶಗಳಿಗೆ ಸಾಕಷ್ಟು ಸಹಕಾರಿಯಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಇದು ಗಣನೀಯ ಕೊಡುಗೆ ನೀಡಲು ಸಹಕಾರಿಯಾಗಿದೆ ಎಂದು ತಿಳಿಸಿದರು.