ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ ದಾಳಿ ಬಳಿಕ ಭಾರತ ಪಾಕ್ ವಿರುದ್ಧ ಒಂದರ ಮೇಲೊಂದು ನಿರ್ಧಾರ ಕೈಗೊಳ್ಳುತ್ತಿದ್ದು, ಇದರ ಭಾಗವಾಗಿ ಈಗ ಪಾಕಿಸ್ತಾನದ ಎಲ್ಲಾ ರೀತಿಯ ವಸ್ತುಗಳ ಆಮದಿಗೆ ನಿರ್ಬಂಧ ವಿಧಿಸಿದೆ.
ವಿದೇಶಿ ವ್ಯಾಪಾರ ನೀತಿ 2023ರ ಅನ್ವಯ ಈ ಘೋಷಣೆ ಮಾಡಲಾಗಿದ್ದು, ಮುಂದಿನ ಆದೇಶದವರೆಗೂ ಇದು ಜಾರಿಯಲ್ಲಿರಲಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
ರಾಷ್ಟ್ರೀಯ ಭದ್ರತೆ ಹಾಗೂ ಸಾರ್ವಜನಿಕ ನೀತಿಯ ಹಿತದೃಷ್ಟಿಯಿಂದ ಈ ನಿರ್ಬಂಧ ಹೇರಲಾಗಿದೆ ಎಂದು ವಿದೇಶಿ ವ್ಯಾಪಾರದ ಮಹಾನಿರ್ದೇಶಕ ತಿಳಿಸಿದ್ದಾರೆ.
ಪಾಕಿಸ್ತಾನದಿಂದ ಭಾರತ ಕೃಷಿ ಉತ್ಪನ್ನಗಳಾದ ಡ್ರೈಫ್ರೂಟ್ಸ್ (ಅಂಜೂರ, ದ್ರಾಕ್ಷಿ, ಬಾದಾಮಿ), ತಾಜಾ ಹಣ್ಣುಗಳು (ಡೇಟ್ಸ್), ಮತ್ತು ಕೆಲವು ಧಾನ್ಯಗಳನ್ನು ಮತ್ತು ಕಲ್ಲು ಉಪ್ಪು, ಸುಣ್ಣದ ಕಲ್ಲು, ಸಿಮೆಂಟ್ ಕಲ್ಲಿನಂತಹ ಖನಿಜ ಉತ್ಪನ್ನಗಳನ್ನು ಹಾಗೂ ಚರ್ಮದ ವಸ್ತುಗಳು, ಹತ್ತಿ, ಉಕ್ಕಿನ ಉತ್ಪನ್ನಗಳಂತಹ ಕೈಗಾರಿಕಾ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಇದರ ಜೊತೆಗೆ ಪಾಕ್‌ನಿಂದ ಆಪ್ಟಿಕಲ್ ಲೆನ್ಸ್‌ಗಳು, ಕೆಲವು ಮಸಾಲೆ ಪದಾರ್ಥಗಳು ಭಾರತಕ್ಕೆ ಬರುತ್ತಿತ್ತು.
ಇನ್ನು ಭಾರತದ ಈ ನಿರ್ಧಾರದಿಂದ ಪಾಕಿಸ್ತಾನದ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಪಾಕಿಸ್ತಾನದ ರಫ್ತು ಆದಾಯದ ಗಣನೀಯ ಭಾಗವು ಭಾರತಕ್ಕೆ ಸಂಬಂಧಿಸಿದೆ. ಈ ಆಮದುಗಳನ್ನು ತಡೆಯುವುದರಿಂದ ಪಾಕಿಸ್ತಾನದ ಆರ್ಥಿಕತೆಗೆ ದೊಡ್ಡ ಹೊಡೆತವಾಗುತ್ತದೆ. ವಿಶೇಷವಾಗಿ ಕೃಷಿ ಮತ್ತು ಖನಿಜ ಉತ್ಪನ್ನಗಳ ರಫ್ತುದಾರರಿಗೆ ಪರಿಣಾಮ ಬೀರುತ್ತದೆ.
ಭಾರತಕ್ಕೆ ರಫ್ತು ಕಡಿಮೆಯಾದರೆ, ಪಾಕಿಸ್ತಾನದ ವಿದೇಶಿ ವಿನಿಮಯ ಸಂಗ್ರಹ ಕಡಿಮೆಯಾಗುತ್ತದೆ. ಇದು ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ಮತ್ತಷ್ಟು ತೊಂದರೆಯನ್ನುಂಟುಮಾಡುತ್ತದೆ.