ಭಾರತ ಅಮೆರಿಕ, ರಷ್ಯಾ, ಚೀನಾದಂತೆ ದಬ್ಬಾಳಿಕೆ ನಡೆಸುವ ರಾಷ್ಟ್ರವಾಗಲು ಇಷ್ಟಪಡುವುದಿಲ್ಲ: ಮೋಹನ್ ಭಾಗವತ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತವು ತನ್ನ ಧಾರ್ಮಿಕ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ನಂಬಿಕೆ ಹೊಂದಿದೆ ಮತ್ತು ಇದು ವೇದಗಳ ಕಾಲದಿಂದಲೂ ನಡೆದುಕೊಂಡು ಬಂದಿದೆ. ಈ ವಿಷಯದಲ್ಲಿ ಭಾರತವು ಅಮೆರಿಕ, ರಷ್ಯಾ ಅಥವಾ ಚೀನಾ ರೀತಿಯಲ್ಲಿ ದಬ್ಬಾಳಿಕೆ ನಡೆಸುವ ರಾಷ್ಟ್ರವಾಗಲು ಇಷ್ಟಪಡುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ(RSS) ಮುಖ್ಯಸ್ಥ ಮೋಹನ್ ಭಾಗವತ್ ಅವರು ಹೇಳಿದ್ದಾರೆ.

ಗುಜರಾತಿನಲ್ಲಿ ನಡೆದ ವೇದ ಸಂಸ್ಕೃತ ಜ್ಞಾನ ಗೌರವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ದೇಶವು ನೀತಿವಂತ ರಾಷ್ಟ್ರವಾಗಿ ಅಭಿವೃದ್ಧಿ ಹೊಂದುತ್ತಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ತನ್ನ ದಾರಿಯನ್ನು ಸುಗಮಗೊಳಿಸುತ್ತಿರುವಾಗ ಅದರ ಧಾರ್ಮಿಕ ಕರ್ತವ್ಯಗಳನ್ನು ನಿರ್ವಹಿಸುತ್ತಿದೆ ಎಂದು ಹೇಳಿದರು.

ಇಂದು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಇತರ ರಾಷ್ಟ್ರಗಳ ಮೇಲೆ ದಬ್ಬಾಳಿಕೆ ನಡೆಸುತ್ತವೆ. ರಷ್ಯಾ ಬಲಿಷ್ಠವಾಗಿದ್ದಾಗ ಅದನ್ನು ಬಲಹೀನಗೊಳಿಸಲು ಅಮೆರಿಕ ಮುಂದಾಯಿತು. ಈಗ ಚೀನಾ ಅಮೆರಿಕವನ್ನು ಸದೆಬಡಿಯಲು ಮುಂದಾಗುತ್ತಿದೆ. ಆದರೆ ಅಮೆರಿಕ ಮತ್ತು ರಷ್ಯಾಗಳೆರಡೂ ಉಕ್ರೇನ್ ದೇಶವನ್ನು ಕಾಯಿಯಾಗಿ ಬಳಸುತ್ತಿವೆ. ಸಂಬಂಧ ಯಾವ ರೀತಿಯಲ್ಲಿದೆ ಎಂಬುದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಅಗತ್ಯ ಬಿದ್ದಾಗ ಇತರ ರಾಷ್ಟ್ರಗಳಿಗೆ ಭಾರತವು ಯಾವಾಗಲೂ ನೆರವು ನೀಡುತ್ತಾ ಬಂದಿದೆ . ಹೀಗಾಗಿ ಭಾರತವು ಈಗಲೂ ಉಕ್ರೇನ್‌ಗೆ ನೆರವು ನೀಡಲು ಇಚ್ಛಿಸುತ್ತದೆ. ಇದು ನಮ್ಮ ರಾಷ್ಟ್ರ ಎಂದು ಅವರು ಹೇಳಿದರು.

ಭಾರತದ ವಿದೇಶಾಂಗ ನೀತಿಯನ್ನು ಶ್ಲಾಘಿಸಿದ ಭಾಗವತ್ ಅವರು, ಈ ಹಿಂದೆ ಭಾರತವು ಈಗಿನಂತೆ ತನ್ನದೇ ಆದ ನಿರ್ಧಾರವನ್ನು ಕೈಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ.ಯಾವ ರೀತಿ ಶ್ರೀಲಂಕಾ ಯಾವಾಗಲೂ ಪಾಕಿಸ್ತಾನ ಇಲ್ಲವೇ ಚೀನಾದ ಬೆಂಬಲಕ್ಕೆ ನಿಲುತ್ತಿತ್ತು. ತನ್ನ ಆಂತರಿಕ ವಿಷಯಗಳಿಗೆ ಭಾರತವನ್ನು ಯಾವಗಲೂ ದೂರವೇ ಇಟ್ಟಿತ್ತು. ಆದರೆ, ಅದು ಅಪಾಯಕ್ಕೆ ಸಿಲುಕಿಕೊಂಡಿತೋ ಆಗ ಶ್ರೀಲಂಕಾ ನೆರವಿಗೆ ಬಂದಿದ್ದೇ ಭಾರತ. ನಮ್ಮ ರಾಷ್ಟ್ರವು ಎಂದಿಗೂ ಇತರ ರಾಷ್ಟ್ರಗಳ ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳಲು ಹೋಗುವುದಿಲ್ಲ ಎಂದು ಅವರು ತಿಳಿಸಿದರು.
ಭಾರತವು ಈಗ ಧಾರ್ಮಿಕ ನಂಬಿಕೆಗಳೊಂದಿಗೆ ಮುಂದುವರಿಯುತ್ತಿದೆ. ಧರ್ಮಕ್ಕಾಗಿ ಹೋರಾಡುವ ದೇಶವು ಬೇರೆ ಯಾವುದೇ ದೇಶದಿಂದ ಪ್ರಯೋಜನ ಪಡೆಯುವುದಿಲ್ಲ ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!