ಹೊಸದಿಗಂತ ಡಿಜಿಟಲ್ ಡೆಸ್ಕ್:
ತವರು ನೆಲದಲ್ಲಿ ಐಸಿಸಿ ಮಹಿಳಾ ವಿಶ್ವಕಪ್‌ನ ಸೆಮಿಫೈನಲ್ ಹಂತ ತಲುಪಿ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಗಮನಾರ್ಹ ಸಾಧನೆ ಮಾಡಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳಲ್ಲಿ ಮಿಂಚಿದರೂ, ಇಡೀ ಟೂರ್ನಿಯಲ್ಲಿ ತಂಡವನ್ನು ಕಾಡುತ್ತಿರುವ ಒಂದು ಪ್ರಮುಖ ನ್ಯೂನತೆ ಮಾತ್ರ ಸರಿಹೋಗಿಲ್ಲ. ಸೆಮಿಫೈನಲ್‌ನ ನಿರ್ಣಾಯಕ ಪಂದ್ಯದಲ್ಲೂ ಅದೇ ‘ಕೈಚೆಲ್ಲಿದ ಕ್ಯಾಚ್’ಗಳ ಕರಾಳ ಕಥೆ ಮುಂದುವರೆದಿದ್ದು, ಅಭಿಮಾನಿಗಳಲ್ಲಿ ತೀವ್ರ ನಿರಾಸೆ ಮೂಡಿಸಿದೆ.
ಏಳು-ಬೀಳುಗಳೊಂದಿಗೆ ಸೆಮಿಫೈನಲ್‌ಗೆ ಪ್ರವೇಶಿಸಿದ್ದ ಭಾರತಕ್ಕೆ, ಆಸ್ಟ್ರೇಲಿಯಾ ವಿರುದ್ಧದ ಈ ಪ್ರಮುಖ ಪಂದ್ಯದಲ್ಲಿ ತನ್ನ ಕಳಪೆ ಫಿಲ್ಡಿಂಗ್ ಅನ್ನು ಸರಿಪಡಿಸಿಕೊಳ್ಳುವ ಕೊನೆಯ ಅವಕಾಶವಿತ್ತು. ಆದರೆ, ನವಿ ಮುಂಬೈನಲ್ಲಿ ನಡೆದ ಸೆಮಿಫೈನಲ್ ಪಂದ್ಯದ ಮೂರನೇ ಓವರ್‌ನಲ್ಲೇ ಈ ಹಳೇ ರಾಗ ಮತ್ತೆ ಶುರುವಾಯಿತು.
ನಾಯಕಿ ಕೌರ್ ಅವರಿಂದಲೇ ಮೊದಲ ಎಡವಟ್ಟು
ಆಸ್ಟ್ರೇಲಿಯಾದ ಅಪಾಯಕಾರಿ ಆಟಗಾರ್ತಿ ಅಲಿಸಾ ಹೀಲಿ ಕೇವಲ 2 ರನ್ ಗಳಿಸಿದ್ದಾಗ, ರೇಣುಕಾ ಸಿಂಗ್ ಬೌಲಿಂಗ್‌ನಲ್ಲಿ ಮಿಡ್-ಆಫ್‌ನಲ್ಲಿ ಬಂದ ಸುಲಭ ಕ್ಯಾಚ್ ಅನ್ನು ನಾಯಕಿ ಹರ್ಮನ್‌ಪ್ರೀತ್ ಕೌರ್ ಕೈಚೆಲ್ಲಿದರು. ಹೀಲಿ ಫಾರ್ಮ್ ಗಮನಿಸಿದರೆ, ಈ ಒಂದು ತಪ್ಪು ತಂಡಕ್ಕೆ ಭಾರೀ ಬೆಲೆ ತೆರುವಂತೆ ಮಾಡಬಹುದು ಎಂದು ಎಲ್ಲರೂ ಆತಂಕಗೊಂಡಿದ್ದರು. ಅದೃಷ್ಟವಶಾತ್, ಹೀಲಿ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಆದರೆ, ಇಂತಹ ನಿರ್ಣಾಯಕ ಪಂದ್ಯದಲ್ಲಿ ನಾಯಕಿಯೇ ಸರಳ ಕ್ಯಾಚ್ ಕೈಬಿಟ್ಟಿದ್ದು, ತಂಡದ ಕಳಪೆ ಫಿಲ್ಡಿಂಗ್ ಮಟ್ಟವನ್ನು ಎತ್ತಿ ತೋರಿಸುತ್ತದೆ.
ಆಘಾತಕಾರಿ ಅಂಕಿ-ಅಂಶ: 18 ಕ್ಯಾಚ್‌ಗಳ ಕೈಚೆಲ್ಲುವಿಕೆ!
ಭಾರತೀಯ ಆಟಗಾರ್ತಿಯರ ಕಳಪೆ ಫಿಲ್ಡಿಂಗ್ ಪ್ರದರ್ಶನವು ಕೇವಲ ಈ ಒಂದು ಪಂದ್ಯಕ್ಕೆ ಸೀಮಿತವಾಗಿಲ್ಲ. ಇಡೀ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಇದುವರೆಗೆ ಬರೋಬ್ಬರಿ 18 ಕ್ಯಾಚ್‌ಗಳನ್ನು ಕೈಬಿಟ್ಟಿದೆ. ಇದು ಗೆಲ್ಲಬೇಕಾದ ಅನೇಕ ಪಂದ್ಯಗಳನ್ನು ಸೋಲುವಂತೆ ಮಾಡಿದೆ.
ಅಂಕಿ-ಅಂಶಗಳ ಪ್ರಕಾರ, ಈ ವಿಶ್ವಕಪ್‌ನಲ್ಲಿ ಭಾರತ ತಂಡ ಒಟ್ಟು 35 ಕ್ಯಾಚ್‌ಗಳನ್ನು ಹಿಡಿದಿದ್ದರೆ, 18 ಕ್ಯಾಚ್‌ಗಳನ್ನು ಕೈಬಿಟ್ಟಿದೆ. ಟೀಂ ಇಂಡಿಯಾದ ಕ್ಯಾಚಿಂಗ್ ಯಶಸ್ಸಿನ ಪ್ರಮಾಣ ಕೇವಲ 66 ಪ್ರತಿಶತದಷ್ಟಿದ್ದು, ಎಂಟು ತಂಡಗಳ ಈ ಟೂರ್ನಮೆಂಟ್‌ನಲ್ಲಿ ಇದು ಏಳನೇ ಸ್ಥಾನದಲ್ಲಿದೆ.
ಕ್ಯಾಚಿಂಗ್ ಮಾತ್ರವಲ್ಲ, ಫೀಲ್ಡಿಂಗ್ ಕೂಡ ಕಳಪೆಯೇ
ಸೆಮಿಫೈನಲ್‌ನಲ್ಲಿ ಭಾರತದ ಫೀಲ್ಡಿಂಗ್ ಕ್ಯಾಚಿಂಗ್‌ಗಿಂತಲೂ ಕೆಟ್ಟದಾಗಿತ್ತು. ಹೀಲಿ ಔಟಾದ ನಂತರ ಆಸ್ಟ್ರೇಲಿಯಾದ ಮೇಲೆ ಒತ್ತಡ ಹೇರುವ ಅವಕಾಶವಿದ್ದಾಗ, ಟೀಂ ಇಂಡಿಯಾ ಆಟಗಾರ್ತಿಯರು ಸುಲಭವಾಗಿ ಬೌಂಡರಿಗಳನ್ನು ಬಿಟ್ಟುಕೊಟ್ಟರು. ಕಳಪೆ ಫೀಲ್ಡಿಂಗ್‌ನಿಂದಾಗಿ ಆಸ್ಟ್ರೇಲಿಯಾ ತಂಡ ಆಗಾಗ್ಗೆ ಹೆಚ್ಚುವರಿ ರನ್‌ಗಳನ್ನು ಕಲೆಹಾಕುವಲ್ಲಿ ಯಶಸ್ವಿಯಾಯಿತು.
ಬ್ಯಾಟಿಂಗ್ ಮತ್ತು ಬೌಲಿಂಗ್‌ನ ಬಲದಿಂದ ಸೆಮಿಫೈನಲ್‌ಗೆ ಬಂದ ಟೀಂ ಇಂಡಿಯಾ, ತನ್ನ ಏಕೈಕ ಮತ್ತು ದೊಡ್ಡ ನ್ಯೂನತೆಯಾದ ಕಳಪೆ ಫಿಲ್ಡಿಂಗ್ ಅನ್ನು ಸರಿಪಡಿಸಿಕೊಳ್ಳುವಲ್ಲಿ ವಿಫಲವಾಗಿದೆ. ಈ ‘ಭೂತ’ ಬೆನ್ನು ಬಿಡದಿದ್ದರೆ, ಭಾರತದ ವಿಶ್ವಕಪ್ ಕನಸು ನನಸಾಗುವುದು ಕಷ್ಟ.

