ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಹಾಗೂ ಇಂಗ್ಲೆಂಡ್ ಮ್ಯಾಚ್ ರೋಚಕಘಟ್ಟದತ್ತ ಸಾಗಿದೆ. ಲಾರ್ಡ್ಸ್ ಮೈದಾನದಲ್ಲಿ ಗೆಲುವಿಗಾಗಿ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟ ಕಂಡುಬರುತ್ತಿದೆ.
ಈ ನಡುವೆ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ಗೆ ಐಸಿಸಿ ದಂಡದ ಬರೆ ಎಳೆದಿದೆ. ವಾಸ್ತವವಾಗಿ ಈ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಬೌಲಿಂಗ್ ಮಾಡುವ ವೇಳೆ ಮೊಹಮ್ಮದ್ ಸಿರಾಜ್, ಐಸಿಸಿ (ICC) ನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದರು. ಇಂಗ್ಲೆಂಡ್ ಆರಂಭಿಕ ಆಟಗಾರ ಬೆನ್ ಡಕೆಟ್ ವಿಕೆಟ್ ಉರಳಿಸಿದ್ದ ಸಿರಾಜ್, ಅವರ ಬಳಿ ಹೋಗಿ ಆಕ್ರಮಣಕಾರಿಯಾಗಿ ಸಂಭ್ರಮಾಚರಿಸಿದಲ್ಲದೆ, ಈ ವೇಳೆ ಅವರ ಭುಜಕ್ಕೆ ತಮ್ಮ ಭುಜ ತಾಗಿಸಿದ್ದರು. ಹೀಗಾಗಿ ಸಿರಾಜ್ ಐಸಿಸಿ ನೀತಿ ಸಂಹಿತೆಯ ಸೆಕ್ಷನ್ 2.5 ರ ಅಡಿಯಲ್ಲಿ ತಪ್ಪಿತಸ್ಥರೆಂದು ಪರಿಗಣಿಸಲಾಗಿದ್ದು, ದಂಡ ವಿಧಿಸಲಾಗಿದೆ.
ಈ ತಪ್ಪಿಗೆ ಸಿರಾಜ್ಗೆ ದಂಡ ವಿಧಿಸಲಾಗಿದ್ದು, ಅವರ ಖಾತೆಗೆ ಒಂದು ಡಿಮೆರಿಟ್ ಪಾಯಿಂಟ್ ಕೂಡ ಸೇರಿದೆ. ಈ ಮೂಲಕ ಸಿರಾಜ್ ಇದುವರೆಗೆ ಒಟ್ಟು 2 ಡಿಮೆರಿಟ್ ಪಾಯಿಂಟ್ಗಳನ್ನು ಪಡೆದಿದ್ದಾರೆ. ಕಳೆದ 24 ತಿಂಗಳಲ್ಲಿ ಇದು ಸಿರಾಜ್ ಮಾಡಿದ ಎರಡನೇ ತಪ್ಪಾಗಿದ್ದು, ಸಿರಾಜ್ಗೆ ಒಂದು ಪಂದ್ಯದಿಂದ ನಿಷೇಧಕ್ಕೊಳಗಾಗುವ ಭೀತಿ ಎದುರಾಗಿದೆ.