ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತ-ಯುರೋಪಿಯನ್ ಯೂನಿಯನ್ ನಡುವಣ ಮುಕ್ತ ವ್ಯಾಪಾರ ಒಪ್ಪಂದವು ಭಾರತದ ವಿವಿಧ ರಾಜ್ಯಗಳಿಗೆ ನೆರವಾಗಲಿದ್ದು, ಕರ್ನಾಟಕ, ಕೇರಳ, ತಮಿಳ್ನಾಡು, ಮಹಾರಾಷ್ಟ್ರ,ಗುಜರಾತ್, ಆಂಧ್ರಪ್ರದೇಶ, ಅಸ್ಸಾಂ ಸೇರಿದಂತೆ ವಿವಿಧ ರಾಜ್ಯಗಳ ಉತ್ಪಾದನಾ ವಲಯಗಳ ರಫ್ತಿಗೆ ಭಾರೀ ಉತ್ತೇಜನ ಲಭಿಸಲಿದೆ.
‘ಎಲ್ಲ ಒಪ್ಪಂದಗಳ ತಾಯಿ’ ಎಂದು ಬಣ್ಣಿಸಲ್ಪಟ್ಟಿರುವ ಈ ಒಪ್ಪಂದದಿಂದ ಯುರೋಪಿಯನ್ ಯೂನಿಯನ್‌ಗೆ ಭಾರತದ ರಫ್ತಿಗೆ 6.4 ಲ.ಕೋ.ರೂ.ಗಳ ಸೇರ್ಪಡೆಯಾಗಲಿದೆ ಎಂದು ಅಂದಾಜಿಸಲಾಗಿದೆ.ವಿಶೇಷವಾಗಿ ಭಾರತದ ಸಣ್ಣ, ಅತಿಸಣ್ಣ, ಮಧ್ಯಮವರ್ಗದ ಉದ್ಯಮಗಳು, ಉತ್ಪಾದಕರು, ರೈತರು ಹಾಗೂ ವೃತ್ತಿಪರರಿಗೆ ಈ ಒಪ್ಪಂದ ವರದಾನವಾಗಲಿದೆ.
ಈ ಒಪ್ಪಂದವು ಭಾರತದ ಒಟ್ಟಾರೆ ಆರ್ಥಿಕತೆಗೆ ಶಕ್ತಿ ತುಂಬುವುದಷ್ಟೇ ಅಲ್ಲದೆ, ವಿವಿಧ ರಾಜ್ಯಗಳ ರಪ್ತುನ್ನು ಹೆಚ್ಚು ಸ್ಪರ್ಧಾತ್ಮಕಗೊಳಿಸುವ ಜೊತೆಗೆ ಅವುಗಳ ಆರ್ಥಿಕತೆಯನ್ನೂ ಬಲಿಷ್ಠಗೊಳಿಸಲಿದೆ.
ವಿಶೇಷವಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಪ್ರಬುದ್ಧ ಸುಂಕಾಸಗಳ ಹಾವಳಿಯಿಂದ ಹೊಡೆತ ಎದುರಿಸಲಿದ್ದ ಭಾರತದ ಜವುಳಿ, ಉತ್ಪಾದಕ , ಕೃಷಿಯಂತಹ ಕ್ಷೇತ್ರಗಳಿಗೆ ಈ ಒಪ್ಪಂದ ಮರು ಬಲ ನೀಡಲಿದೆ. ಈಗ ಅಮೆರಿಕವೊಂದನ್ನೇ ನೆಚ್ಚಿಕೊಳ್ಳುವ ಬದಲಿಗೆ ಭಾರತಕ್ಕೆ ತನ್ನ ಉತ್ಪನ್ನಗಳಿಗೆ ವಿಶ್ವದಾದ್ಯಂತ ಇರುವ ಮಾರುಕಟ್ಟೆಗಳು ತೆರೆದುಕೊಳ್ಳುವಂತೆ ಮಾಡಲು ಈ ಒಪ್ಪಂದ ಭಾರೀ ಉತ್ತೇಜನ ನೀಡಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
9,425 ಸುಂಕ ಮಾರ್ಗಗಳನ್ನು ತೊಡೆದುಹಾಕುವ ಪ್ರಸ್ತಾವವುಳ್ಳ ಈ ಒಪ್ಪಂದದಿಂದ ಭಾರತದ ಅತಿಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆಗಳು, ಉತ್ಪಾದಕ ವಲಯಗಳು, ರೈತರು ಮತ್ತು ವೃತ್ತಿಪರರಿಗೆ ದೊಡ್ಡ ಪ್ರಮಾಣದಲ್ಲಿ ಯುರೋಪಿನ ಮಾರುಕಟ್ಟೆಗಳು ತೆರೆದುಕೊಳ್ಳಲಿವೆ.ಅದರಲ್ಲೂ ಕಾರ್ಮಿಕ ತೀವ್ರತೆಯ ಕ್ಷೇತ್ರಗಳಾದ ಜವುಳಿ, ಉಡುಪು, ಚರ್ಮ, ಮುತ್ತು,ರತ್ನಗಳು, ಆಭರಣಗಳು, ಕರಕುಶಲ ವಸ್ತುಗಳು, ಕಾಫಿ, ಚಹಾ, ಮಸಾಲೆಗಳು, ಸಮುದ್ರ ಉತ್ಪನ್ನಗಳಿಗೆ ಯುರೋಪಿಯನ್ ಮಾರುಕಟ್ಟೆಗಳಲ್ಲಿ ಶೂನ್ಯ ಇಲ್ಲವೇ ಭಾರೀ ಸುಂಕ ರಿಯಾಯಿತಿಯ ಪ್ರವೇಶ ಲಭಿಸಲಿದೆ.ಹಾಗೆಯೇ ಉನ್ನತ ತಂತ್ರಜ್ಞಾನ ಆಧಾರಿತ ಕೈಗಾರಿಕಾ ಮತ್ತು ಇಂಜಿನಿಯರಿಂಗ್ ಸರಕುಗಳು, ಇಲೆಕ್ಟ್ರಾನಿಕ್ಸ್ ಉತ್ಪನ್ನಗಳು, ಔಷಧ ಉತ್ಪನ್ನಗಳು ಮತ್ತು ವೈದ್ಯಕೀಯ ಸಾಧನಗಳ ರಪ್ತಿಗೂ ಉತ್ತೇಜನ ಲಭಿಸಲಿದೆ.
ಕರ್ನಾಟಕ
ಕರ್ನಾಟಕದ ಮುಂದುವರಿದ ಉತ್ಪಾದನೆ ಮತ್ತು ರಫ್ತು ಸೇವೆಗಳ ಸಂಪರ್ಕಗಳಲ್ಲಿ ಆದ್ಯತೆಯ ಪ್ರವೇಶವನ್ನು ಬೆಳವಣಿಗೆಯಾಗಿ ಪರಿವರ್ತಿಸಲು ಕರ್ನಾಟಕವು ಉತ್ತಮ ಸ್ಥಾನದಲ್ಲಿದೆ. ಘಟಕ ಮತ್ತು ಪೂರಕ ಎಂಎಸ್‌ಎಂಇಗಳ ಬಲವಾದ ಪರಿಸರ ವ್ಯವಸ್ಥೆಯಿಂದ ಬೆಂಬಲಿತವಾದ ಇಂಜಿನಿಯರಿಂಗ್ ಸರಕುಗಳು, ಇಲೆಕ್ಟ್ರಾನಿಕ್ಸ್ ಮತ್ತು ಔಷಯ ಕ್ಷೇತ್ರದಲ್ಲಿ ಬೆಂಗಳೂರು ತುಮಕೂರಿನಿಂದ ರಫ್ತು ಹೆಚ್ಚಳವನ್ನು ನಿರೀಕ್ಷಿಸಲಾಗಿದೆ.ವಿಶೇಷವಾಗಿ ಜವುಳಿ ಮತ್ತು ಸಮುದ್ರ ಉತ್ಪನ್ನಗಳ ಕ್ಷೇತ್ರಕ್ಕೂ ಹೆಚ್ಚಿನ ವರದಾನವಾಗಲಿದೆ.
ಬೆಂಗಳೂರಿನ ಉಡುಪು ರಫ್ತುದಾರರು , ರಾಸಾಯನಿಕ ಕ್ಷೇತ್ರಗಳವರು ಸಹ ಲಾಭ ಪಡೆಯಲಿದ್ದಾರೆ. ಇದು ಹೆಚ್ಚಿನ ಕೌಶಲ್ಯ ವಲಯಗಳ ಜೊತೆಗೆ ಕಾರ್ಮಿಕ-ತೀವ್ರತೆಯ ಉತ್ಪಾದನೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಗೆ ಸಹಾಯ ಮಾಡಲಿದೆ.
ಮಹಾರಾಷ್ಟ್ರ
ಮಹಾರಾಷ್ಟ್ರದ ಉತ್ಪಾದನಾ ಮತ್ತು ಎಂಎಸ್‌ಎಂಇಗಳೆರಡೂ ಬಲಿಷ್ಠಗೊಳ್ಳಲು ಈ ಒಪ್ಪಂದ ನೆರವಾಗಲಿದೆ.ಶೇ.99.6ರಷ್ಟು ರಫ್ತುಗಳ ಮೇಲಿನ ಸುಂಕ ಶೂನ್ಯಕ್ಕೆ ಇಳಿಸಲಾಗಿದ್ದರಿಂದ ಈಚಲ್‌ಕಾರಂಜಿಯ ಉಡುಪು ತಯಾರಕರು, ಪುಣೆಯ ಇಂಜಿನಿಯರಿಂಗ್, ಇಲೆಕ್ಟ್ರಾನಿಕ್ ಮತ್ತು ಫಾರ್ಮಾ ಕ್ಷೇತ್ರಗಳಿಗೆ ಹೆಚ್ಚಿನ ಲಾಭ ದೊರೆಯಲಿದೆ.ಇಲ್ಲಿ ಜವುಳಿ ಕ್ಷೇತ್ರದ ಸುಂಕ ಶೇ.12ರಿಂದ ಮತ್ತು ಇಲೆಕ್ಟ್ರಾನಿಕ್ ಉತ್ಪನ್ನಗಳ ಸುಂಕ ಶೇ.14ರಿಂದ ಶೂನ್ಯಕ್ಕೆ ಇಳಿಯಲಿದೆ.ಥಾಣೆ , ರಾಯಗಢದ ಫಾರ್ಮಾಸ್ಯುಟಿಕಲ್ ಮತ್ತು ಮುಂಬಯಿಯ ರತ್ನಗಳು ಮತ್ತು ಆಭರಣಗಳು, ಉನ್ನತ ಮೌಲ್ಯದ ಉತ್ಪಾದನಾ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ.
ಗುಜರಾತ್
ಗುಜರಾತಿನ ಎಂಎಸ್‌ಎಂಇಗಳು, ಜವುಳಿ, ವಜ್ರ, ಆಭರಣಗಳು , ಬರೂಚ್ ವಡೋದರಾದ ರಾಸಾಯನಿಕಗಳು, ರಾಜ್‌ಕೋಟ್‌ನ ಇಂಜಿನಿಯರಿಂಗ್ ವಸ್ತುಗಳು, ಇಲೆಕ್ಟ್ರಾನಿಕ್ಸ್, ಸಮುದ್ರ ಉತ್ಪನ್ನಗಳು , ಸಂಸ್ಕರಣಾ ಘಟಕಗಳಿಗೆ ನೆರವಾಗಲಿದೆ.
ತಮಿಳ್ನಾಡು
ಈಗಾಗಲೇ ಜಾಗತಿಕ ಸ್ಪರ್ಧಾತ್ಮಕತೆ ಹೊಂದಿರುವ ತಮಿಳ್ನಾಡಿನ ಕಾರ್ಮಿಕ ಆದ್ಯತೆಯ ಕ್ಷೇತ್ರಗಳಿಗೆ ತಕ್ಷಣದ ಲಾಭವಾಗಲಿದೆ.ತಿರುಪುರದ ಉಡುಪು, ವೆಲ್ಲೂರು-ಅಂಬೂರ್‌ನ ಪಾದರಕ್ಷೆಗಳು,ಚೆನ್ನೈ, ಕೊಯಮತ್ತೂರುಗಳ ಇಂಜಿನಿಯರಿಂಗ್, ಇಲೆಕ್ಟ್ರಾನಿಕ್ಸ್ ಮತ್ತು ಉತ್ಪಾದನಾ ವಲಯಗಳಿಗೆ ಬಹುದೊಡ್ಡ ಲಾಭವಾಗುವ ನಿರೀಕ್ಷೆಯಿದೆ.ಜವುಳಿ ಉತ್ಪನ್ನಗಳಿಗೆ ಶೇ.12ರಿಂದ ಶೂನ್ಯಕ್ಕೆ ಮತ್ತು ಪಾದರಕ್ಷೆಗಳ ಮೇಲಿನ ಸುಂಕ ಶೇ.17ರಿಂದ ಶೂನ್ಯಕ್ಕೆ ಇಳಿಯಲಿರುವುದು ಈ ವಲಯದಲ್ಲಿ ಉತ್ಸಾಹ ಮೂಡಿಸಿದೆ.
ಅಸ್ಸಾಂ, ಪಶ್ಚಿಮ ಬಂಗಾಲ
ಅಸ್ಸಾಮ್‌ನ ರೈತರು ಮತ್ತು ಕರಕುಶಲ ಉತ್ಪಾದಕರಿಗೆ ಯುರೋಪಿನ ಪ್ರಮುಖ ಮಾರುಕಟ್ಟೆಗಳು ಈಗ ತೆರೆದುಕೊಳ್ಳಲಿವೆ.ದಿಭ್ರೂಗಢ-ಜೊರ್‍ಹಾಟ್‌ನ ಚಹಾ ಮತ್ತು ಮೇಲ್ ಅಸ್ಸಾಮಿನ ಮಸಾಲಾ ಉತ್ಪನ್ನಗಳಿಗೆ , ನಲ್ಬಾರಿ , ಬರ್ಪೆಟಾ ಬಿದಿರಿನ ಪೀಠೋಪಕರಣಗಳು, ಕರಕುಶಲ ವಸ್ತುಗಳಿಗೆ , ಔಷಯ ರಫ್ತಿಗೆ ಅಲ್ಲಿ ದೊಡ್ಡ ಬೇಡಿಕೆ ಲಭ್ಯವಾಗಲಿದೆ.ಪಶ್ಚಿಮ ಬಂಗಾಲದ ಚಹಾ, ಸಮುದ್ರ ಉತ್ಪನ್ನಗಳು, ಕರಕುಶಲ ವಸ್ತುಗಳು, ಡಾರ್ಜಿಲಿಂಗ್‌ನ ಚಹಾ, ದಿಘಾ ಮತ್ತು ಹಲ್ದಿಯಾದ ಸಮುದ್ರ ಉತ್ಪನ್ನಗಳು,ಪಾರಂಪರಿಕ ಕರಕುಶಲ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಬರಲಿದೆ.ಶೈತ್ಯಾಗಾರದಲ್ಲಿನ ಮೀನು ಮತ್ತು ಸಮುದ್ರ ಉತ್ಪನ್ನಗಳಿಗೆ ಈಗ ಶೇ.೨೬ರ ಭಾರೀ ಸುಂಕವಿದ್ದು, ಅದು ಶೂನ್ಯಕ್ಕೆ ಇಳಿಯಲಿರುವುದು ಇಲ್ಲಿನ ರಫ್ತುಗೆ ಉತ್ತೇಜನ ನೀಡಲಿದೆ.
ಕೇರಳ
ಕೇರಳದಲ್ಲಿನ ಬಹುಬೇಡಿಕೆಯ ಆಹಾರ ಮತ್ತು ಮಸಾಲಾ ಉತ್ಪನ್ನಗಳು ಯುರೋಪಿನ ಮಾರುಕಟ್ಟೆಗೆ ಲಗ್ಗೆಯಿಡಲಿದ್ದು, ಇದು ಕೇರಳದ ರೈತರು , ಮೀನುಗಾರರ ಆದಾಯಗಳನ್ನು ಹೆಚ್ಚಿಸಲಿದೆ.ಕೊಚ್ಚಿ, ಆಲಪ್ಪುಳದ ಮೀನು, ಸಿಗಡಿ, ಟೂನ ರಫ್ತಿಗೆ ಉತ್ತೇಜನ ಲಭಿಸಲಿದೆ. ಇಡುಕ್ಕಿ, ವಯನಾಡಿನ ಕಾಳುಮೆಣಸು, ಏಲಕ್ಕಿಯಂತಹ ಉತ್ಪನ್ನಗಳಿಗೂ ಹೊಸ ಮಾರುಕಟ್ಟೆಗಳು ಲಭಿಸಲಿವೆ.ಇದು ಇಲ್ಲಿನ ರೈತರ ಆದಾಯಗಳನ್ನು ಹೆಚ್ಚಿಸಲಿವೆ.
ಆಂಧ್ರಪ್ರದೇಶ, ತೆಲಂಗಾಣ
ಆಂಧ್ರಪ್ರದೇಶದ ಕರಾವಳಿ ರಫ್ತು ಆಧಾರಿತ ಉತ್ಪನ್ನಗಳಿಗೆ ಹೊಸ ಬೇಡಿಕೆ, ಮೌಲ್ಯರ್ವತ ಉತ್ಪನ್ನಗಳಿಗೆ ವಿಶೇಷ ಬೇಡಿಕೆಗಳು ಲಭಿಸಲಿವೆ.ವಿಶಾಖಪಟ್ಟಣಂ, ಕಾಕಿನಾಡಗಳಿಂದ ಶ್ರಿಂಪ್ ಮತ್ತು ಸಮುದ್ರ ಆಹಾರ ಉತ್ಪನ್ನಗಳ ರಫ್ತಿಗೆ ಉತ್ತೇಜನ ಲಭಿಸಲಿದ್ದು, ಸಂಸ್ಕರಣಾ ಕ್ಷೇತ್ರಗಳಿಂದ ಮೀನುಗಾರಿಕಾ ಕ್ಷೇತ್ರದಲ್ಲೂ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸಲು ನೆರವಾಗಲಿದೆ.ಫಾರ್ಮಾ ಮತ್ತು ಇಲೆಕ್ಟ್ರಾನಿಕ್ ರಫ್ತು ವಿಸ್ತರಣೆಗೂ ಕಾರಣವಾಗಲಿದೆ.ಇದೇ ರೀತಿ ತೆಲಂಗಾಣ ಕೂಡ ಜವುಳಿ ಮತ್ತು ಅತ್ಯಾಧುನಿಕ ಉತ್ಪಾದನಾ ವಲಯಗಳ ಮೂಲಕ ಹೆಚ್ಚಿನ ರಫ್ತು ಬೇಡಿಕೆಯ ಅವಕಾಶ ಪಡೆಯಲಿದೆ.ಹೈದರಾಬಾದ್-ವಾರಂಗಲ್‌ನ ಜವುಳಿ ಮತ್ತು ಉಡುಪು , ಎಂಎಸ್‌ಎಂಇಗಳಿಗೆ ಬೆಂಬಲ ಲಭಿಸಲಿದ್ದು, ಉದ್ಯೋಗ ಕ್ಷೇತ್ರಕ್ಕೂ ಹೆಚ್ಚಿನ ಬಲ ತುಂಬಲಿದೆ.ಹೈದರಾಬಾದ್‌ನ ಫಾರ್ಮಾಸ್ಯುಟಿಕಲ್, ಇಲೆಕ್ಟ್ರಾನಿಕ್ಸ್, ಮೆಡಿಕಲ್ ಸಾಧನಗಳು,ಇಂಜಿನಿಯರಿಂಗ್ ಉತ್ಪನ್ನಗಳ ರಫ್ತು ಹೆಚ್ಚಲಿದೆ.
ಪಂಜಾಬ್, ರಾಜಸ್ತಾನ
ಪಂಜಾಬ್ ಮತ್ತು ರಾಜಸ್ತಾನದ ಎಂಎಸ್‌ಎಂಇಗಳು , ಉಡುಪು, ಹೆಣೆದ ಉಡುಪುಗಳ ರಫ್ತು ಹೆಚ್ಚಲಿದೆ.ಜಲಂಧರ್‌ನ ಕ್ರೀಡಾ ಉತ್ಪನ್ನಗಳು , ಇಂಜಿನಿಯರಿಂಗ್ ಉತ್ಪನ್ನಗಳು ಯುರೋಪಿನ ಮಾರುಕಟ್ಟೆಗಳನ್ನು ಆಕರ್ಷಿಸಲಿವೆ.ದೊಡ್ಡಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ.ರಾಜಸ್ತಾನದ ರಫ್ತಿಗೆ ಸಿದ್ಧವಾಗಿರುವ ಆದರೆ ಪದೆ ಪದೆ ನಿರ್ಬಂಧಗಳಿಂದ ಅಡ್ಡಿಗಳನ್ನು ಎದುರಿಸುತ್ತಿರುವ ಕ್ಷೇತ್ರಗಳಿಗೆ ಯುರೋಪಿನ ಮಾರುಕಟ್ಟೆಗಳ ಬಲ ಲಭಿಸಲಿದೆ.ಜೈಪುರದ ಆಭರಣಗಳ ರಫ್ತು ಹೆಚ್ಚಳವಾಗಲಿದೆ.ಜೋಧ್‌ಪುರದ ಮರದ ಪೀಠೋಪಕರಣಗಳು ಮತ್ತು ಕರಕುಶಲ ವಸ್ತುಗಳು , ಕ್ರೀಡಾ ಸಾಧನಗಳು, ಜವುಳಿ ಉತ್ಪನ್ನಗಳು , ಚರ್ಮದ ವಸ್ತುಗಳು ಬಲವಾದ ನೆಲೆಯಲ್ಲಿ ಯುರೋಪಿನ ಮಾರುಕಟ್ಟೆಗೆ ಪ್ರವೇಶ ಪಡೆಯಲಿವೆ.
ಉತ್ತರಪ್ರದೇಶ
ಉತ್ತರಪ್ರದೇಶದಲ್ಲಿ ಕೂಡ ಬೃಹತ್ ಪ್ರಮಾಣದಲ್ಲಿ ಉದ್ಯೋಗಸೃಷ್ಟಿಗೆ ಕಾರಣವಾಗುವಂತಹ ಒಪ್ಪಂದ ಇದಾಗಿದೆ. ಕಾನ್ಪುರ, ಆಗ್ರಾದ ಚರ್ಮ, ಕರಕುಶಲ ವಸ್ತುಗಳಂತಹ ಕಾರ್ಮಿಕ ಕೇಂದ್ರಿತ ವಲಯಗಳಿಗೆ ಉತ್ತೇಜನ ಲಭಿಸಲಿದೆ.ಸಹರಾನ್‌ಪುರ ಪೀಠೋಪಕರಣಗಳು, ಕರಕುಶಲ ವಸ್ತುಗಳು, ನೊಯ್ಡಾದ ಇಲೆಕ್ಟ್ರಾನಿಕ್ ಉತ್ಪಾದನಾ ಕ್ಷೇತ್ರ , ಪಶ್ಚಿಮ ಉತ್ತರಪ್ರದೇಶದ ಕೃಷಿ ಉತ್ಪನ್ನಗಳು ಹೊಸ ಬೇಡಿಕೆ ಪಡೆಯಲಿವೆ.
ಈ ಒಪ್ಪಂದದಿಂದ ಭಾರತೀಯ ಉತ್ಪನ್ನಗಳಿಗೆ ವಿಸ್ತಾರವಾದ ಮಾರುಕಟ್ಟೆಗಳು ಲಭ್ಯವಾಗಲಿದ್ದು, ರಾಜ್ಯಗಳ ಆರ್ಥಿಕತೆಗೆ ಭಾರೀ ಉತ್ತೇಜನ ಲಭಿಸಲಿದೆ .ಭಾರತೀಯ ಮೀನುಗಾರಿಕಾ ವಲಯಕ್ಕೆ ಹೊಸ ದಿಕ್ಕು ಲಭಿಸಲಿದ್ದು, ಮೀನುಗಾರರ ಆದಾಯಕ್ಕೆ ಶಕ್ತಿ ತುಂಬಲಿದೆ ಎಂದು ಭಾರತೀಯ ಸೀಫುಡ್ ಎಕ್ಸ್‌ಪೋರ್ಟರ್‍ಸ್ ಅಸೋಸಿಯೇಶನ್‌ನ ಮಹಾಕಾರ್ಯದರ್ಶಿ ಹಾಗೂ ಮಾಜಿ ಐಆರ್‌ಎಸ್ ಅಕಾರಿ ಡಾ.ಕೆ.ಎನ್.ರಾಘವನ್ ಒತ್ತಿ ಹೇಳಿದ್ದಾರೆ. ಆದರೆ ಆಡಳಿತ ವ್ಯವಸ್ಥೆ, ಗುಣಮಟ್ಟದ ಕಾಳಜಿಯನ್ನು ಮರೆಯುವಂತಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.



