ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ದೇಶಾದ್ಯಂತ 77ನೇ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕೆಂಪು ಕೋಟೆಯಲ್ಲಿ ದೇಶವಾಸಿಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ದೇಶದ ಎಲ್ಲಾ ಕನಸ್ಸುಗಳನ್ನು ಈಡೇರಿಸಲು ನಮ್ಮಲ್ಲಿ ಪ್ರಜಾಪ್ರಭುತ್ವವಿದೆ, ವಿವಿಧತೆಯಲ್ಲಿ ಏಕತೆ ಇದೆ. ಇದು ದೇಶದ ಉತ್ತಮ ಭವಿಷ್ಯಕ್ಕೆ ವರದಾನವಾಗಿದೆ. ಭವಿಷ್ಯದ ಸಾವಿರ ವರ್ಷಗಳನ್ನು ಸಮೃದ್ಧವಾಗಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.
ಮೋದಿಯವರು ತಮ್ಮ ಭಾಷಣದ ವೇಳೆ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಶಾಂತಿ ನೆಲೆಸುವಂತೆ ಮನವಿ ಮಾಡಿದರು. ಅಲ್ಲದೆ ದೇಶಾದ್ಯಂತ ಜನರು ಈಶಾನ್ಯ ರಾಜ್ಯದ ಜನರೊಂದಿಗೆ ನಿಂತಿದ್ದಾರೆ ಎಂದು ಭರವಸೆ ನೀಡಿದರು.
ಇದು ಅಂತ್ಯವಿಲ್ಲದ ಸಾಧ್ಯತೆಗಳನ್ನು ಹೊಂದಿರುವ ವಿಶಾಲ ದೇಶ. ನನ್ನ ಕುಟುಂಬದ 140 ಕೋಟಿ ಸದಸ್ಯರು ಇಂದು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದ್ದಾರೆ. ನಮ್ಮ ನೆಲದ ಮೇಲಿನ ಪ್ರೀತಿಯನ್ನು ಪ್ರದರ್ಶಿಸುವ ನಮ್ಮ ಎಲ್ಲಾ ನಾಗರಿಕರಿಗೆ ಮತ್ತು ದೇಶದ ಹೊರಗಿನವರಿಗೆ ನಾನು ವಂದಿಸುತ್ತೇನೆ. ಎಲ್ಲರಿಗೂ ಈ ಸ್ವಾತಂತ್ರ್ಯ ದಿನದಂದು ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ ಎಂದು ಪ್ರಧಾನಿ ಮೋದಿ ಶುಭಾಶಯ ಕೋರಿದರು.