ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯ ನವೆಂಬರ್ 30 ರಂದು ಕ್ರೈಸ್ಟ್ಚರ್ಚ್ನಲ್ಲಿ ನಡೆಯಲಿದೆ.
ಆದರೆ ಆ ದಿನ ಶೇ.70ರಷ್ಟು ಮಳೆಯಾಗುವ ಸಾಧ್ಯತೆ ಇದೆ.
ಭಾರತ ಮತ್ತು ನ್ಯೂಜಿಲೆಂಡ್ ಏಕದಿನ ಸರಣಿಯ ಕೊನೆಯ ಪಂದ್ಯ
ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ ಈಗಾಗಲೇ ಈ ಸರಣಿಯಲ್ಲಿ 0-1 ಹಿನ್ನಡೆಯಲ್ಲಿದ್ದು, ಸರಣಿ ಸೋಲನ್ನು ತಪ್ಪಿಸಲು ಕೊನೆಯ ಪಂದ್ಯವನ್ನು ಯಾವುದೇ ಬೆಲೆ ತೆತ್ತಾದರೂ ಗೆಲ್ಲಲೇಬೇಕಿದೆ. ಭಾರತ ಮೊದಲ ಪಂದ್ಯದಲ್ಲಿ 7 ವಿಕೆಟ್ಗಳಿಂದ ಸೋತಿತ್ತು. ನಂತರ ಹ್ಯಾಮಿಲ್ಟನ್ನಲ್ಲಿ ನಡೆದ ಎರಡನೇ ಏಕದಿನ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ಸಮಬಲಗೊಳಿಸುವ ಭಾರತದ ಬಯಕೆಗೆ ಮಳೆರಾಯ ತಣ್ಣೀರೆರಚ್ಚಿದ್ದ. ಇದೀಗ ಮೂರನೇ ಪಂದ್ಯಕ್ಕೂ ಮುನ್ನ ಹವಾಮಾನ ಇಲಾಖೆ ನೀಡಿರುವ ವರದಿ ಪ್ರಕಾರ 3ನೇ ಏಕದಿನ ಪಂದ್ಯಕ್ಕೂ ಮಳೆ ಕಾಟ ನೀಡಲಿದೆ. ಹೀಗಾಗಿ ಏಕದಿನ ಸರಣಿಯನ್ನು ಸೋಲುವ ಭೀತಿ ಟೀಂ ಇಂಡಿಯಾಕ್ಕೆ ಎದುರಾಗಿದೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯ ಭಾರತೀಯ ಕಾಲಮಾನ ಬೆಳಗ್ಗೆ 7 ಗಂಟೆಗೆ ಆರಂಭವಾಗಲಿದ್ದು, ಪಂದ್ಯದ ವೇಳೆ ಕ್ರೈಸ್ಟ್ ಚರ್ಚ್ನಲ್ಲಿ ಶೇ.70ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಮಳೆಯಿಂದಾಗಿ ಮೂರನೇ ಏಕದಿನ ಪಂದ್ಯವೂ ರದ್ದಾಗುವ ಸಾಧ್ಯತೆಗಳಿವೆ. ಒಂದು ವೇಳೆ ಕೊನೆಯ ಪಂದ್ಯ ರದ್ದಾದರೆ ಏಕದಿನ ಸರಣಿ ಕಿವೀಸ್ ಪಾಲಾಗಲಿದೆ. ಏಕೆಂದರೆ ನಡೆದಿರುವ ಎರಡು ಪಂದ್ಯಗಳಲ್ಲಿ ಮೊದಲ ಪಂದ್ಯ ಗೆದ್ದು ಬೀಗಿದ್ದ ಕಿವೀಸ್ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.