ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಇಂದು 26 ವಿರೋಧ ಪಕ್ಷಗಳ ಹೊಸ ಮೈತ್ರಿಕೂಟ INDIA ಸಭೆ ನಡೆಸಿದ್ದು, ಈ ವೇಳೆ ಹಲವು ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ.
ಮೊದಲನೆದಾಗಿ ‘ಅಲ್ಪಸಂಖ್ಯಾತರ ವಿರುದ್ಧ ಹೆಚ್ಚುತ್ತಿರುವ ದ್ವೇಷ ಮತ್ತು ಹಿಂಸಾಚಾರ ಹಾಗೂ ಮಹಿಳೆಯರು, ದಲಿತರು, ಆದಿವಾಸಿಗಳು ಮತ್ತು ಕಾಶ್ಮೀರಿಗಳ ಮೇಲೆ ಹೆಚ್ಚುತ್ತಿರುವ ಅಪರಾಧಗಳನ್ನು ತಡೆಯಲು ನಾವು ಒಗ್ಗೂಡಿದ್ದೇವೆ’ ಎಂದು ಪ್ರತಿಪಾದಿಸಿದರು.
ಸಭೆ ಅರಂಭದಲ್ಲಿ ವಿಪಕ್ಷ ಮೈತ್ರಿಕೂಟಕ್ಕೆ ಇಂಡಿಯನ್ ನ್ಯಾಶನಲ್ ಡೆವಲಪ್ಮೆಂಟ್ ಇನ್ಕ್ಲೂಸಿವ್ ಅಲಯನ್ಸ್(ಇಂಡಿಯಾ) ಎಂದು ನಾಮಕರಣ ಮಾಡಲಾಗಿದೆ. ಅಲ್ಲದೆ ಸಮನ್ವಯಕ್ಕಾಗಿ 11 ಸದಸ್ಯರ ಸಮಿತಿಯನ್ನು ರಚಿಸಲಾಗುವುದು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಘೋಷಿಸಿದ್ದಾರೆ.
ಬಳಿಕ’ಸಾಮೂಹಿಕ್ ಸಂಕಲ್ಪ್ (ಜಂಟಿ ನಿರ್ಣಯ)’ದಲ್ಲಿ, ಸಂವಿಧಾನದಲ್ಲಿ ಪ್ರತಿಪಾದಿಸಿರುವ ಭಾರತದ ಕಲ್ಪನೆಯನ್ನು ರಕ್ಷಿಸಲು ಪ್ರತಿಪಕ್ಷಗಳು ದೃಢ ಸಂಕಲ್ಪ ಮಾಡಿವೆ. ನಮ್ಮ ಗಣರಾಜ್ಯದ ಸ್ವರೂಪವನ್ನು ಬಿಜೆಪಿಯು ವ್ಯವಸ್ಥಿತವಾಗಿ ನಾಶ ಮಾಡುತ್ತಿದೆ.ನಮ್ಮ ರಾಷ್ಟ್ರದ ಇತಿಹಾಸದಲ್ಲಿ ನಾವು ಅತ್ಯಂತ ನಿರ್ಣಾಯಕ ಘಟ್ಟದಲ್ಲಿದ್ದೇವೆ. ಭಾರತೀಯ ಸಂವಿಧಾನದ ಆಧಾರ ಸ್ತಂಭಗಳಾದ ಜಾತ್ಯತೀತ ಪ್ರಜಾಪ್ರಭುತ್ವ, ಆರ್ಥಿಕ ಸಾರ್ವಭೌಮತ್ವ, ಸಾಮಾಜಿಕ ನ್ಯಾಯ ಮತ್ತು ಫೆಡರಲಿಸಂ ಅನ್ನು ಕ್ರಮಬದ್ಧವಾಗಿ ಮತ್ತು ಭಯಂಕರವಾಗಿ ದುರ್ಬಲಗೊಳಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಅದೇ ವೇಳೆ ಮಣಿಪುರ ಹಿಂಸಾಚಾರದ ಬಗ್ಗೆಯೂ ವಿರೋಧ ಪಕ್ಷಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಸಂವಿಧಾನದ ಮೇಲೆ ಮತ್ತು ಪ್ರಜಾಸತ್ತಾತ್ಮಕವಾಗಿ ಚುನಾಯಿತ ರಾಜ್ಯ ಸರ್ಕಾರಗಳ ಸಾಂವಿಧಾನಿಕ ಹಕ್ಕುಗಳ ಮೇಲಿನ ನಿರಂತರ ದಾಳಿಯನ್ನು ಒಗ್ಗಟ್ಟಾಗಿ ಎದುರಿಸಲು ನಿರ್ಧರಿಸಲಾಗಿದೆ ಎಂದು ಪ್ರತಿಪಕ್ಷಗಳು ತಿಳಿಸಿವೆ.