ಹೊಸದಿಗಂತ, ಹುಬ್ಬಳ್ಳಿ:
ಭಾರತ ಆರ್ಥಿಕವಾಗಿ ಐದನೇ ಸ್ಥಾನದಲ್ಲಿದ್ದು, ಸ್ವಾತಂತ್ರ್ಯ ಶತಮಾನೋತ್ಸವಕ್ಕೆ ಎಲ್ಲ ಕ್ಷೇತ್ರದಲ್ಲಿಯೂ ಮೊದಲನೇ ಸ್ಥಾನಕ್ಕೇರಬೇಕು. ಇದಕ್ಕೆ ದೇಶದ ಯುವಕರ ಕೊಡುಗೆ ಬಹಳ ಮುಖ್ಯವಾಗಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಡಾ.ಕಿರಣಕುಮಾರ ತಿಳಿಸಿದರು.
ವಿದ್ಯಾನಗರದ ಕೆಎಲ್ ಇ ಸಂಸ್ಥೆಯ ಪ್ರಭಾಕರ ಕೋರೆ ಕ್ರೀಡಾ ಕಾಂಪ್ಲೆಕ್ಸ್ ನಲ್ಲಿ ಏರ್ಪಡಿಸಿದ್ದ ಕೆಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯದ 5 ನೇ ಘಟಿಕೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ವಿಶ್ವದಂತೆ ಭಾರತ ಕಳೆದ 10 ವರ್ಷದಿಂದ ವಿಜ್ಞಾನ, ತಂತ್ರಜ್ಞಾನ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಮಹತ್ತರ ಸುಧಾರಣೆ ಕಂಡಿದೆ. ಈ ಮೊದಲು ಅಮೇರಿಕಾ ಹಾಗೂ ರಷ್ಯಾದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಬಹಳ ಸ್ಪರ್ಧೆ ಇತ್ತು. ಈಗ ಭಾರತವೂ ಆ ನಿಟ್ಟಿನಲ್ಲಿ ಸಾಗುತ್ತಿದೆ. ಇದಕ್ಕೆ ಕಾರಣ ದೇಶದ ಆಡಳಿತ ವ್ಯವಸ್ಥೆ ಎಂದರು.
ಕೋವಿಡ್ ಸಮಯದಲ್ಲಿ ದೇಶ ಹಲವು ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿತು. ಸದ್ಯ ಭಾರತೀಯರು ಉನ್ನತ ಶಿಕ್ಷಣ ಪಡೆಯುವ ಮೂಲಕ ಮಹತ್ತರ ಸಾಧನೆ ಮಾಡುತ್ತಿದ್ದಾರೆ. ವಿದೇಶಿಗರು ಈ ಮೊದಲು ಉದ್ಯಮ ಸ್ಥಾಪಿಸಲು ಬೇರೆ ದೇಶಗಳಿಗೆ ಹೋಗುತ್ತಿದ್ದರು. ಈಗ ಭಾರತ ದತ್ತ ಬರುತ್ತಿದ್ದಾರೆ. ಇದಕ್ಕೆ ಕಾರಣ ದೇಶದಲ್ಲಿ ಇರುವ ಮೂಲಸೌಕರ್ಯ ಒದಗಿಸುವುದಾಗಿದೆ ಎಂದು ತಿಳಿಸಿದರು.
ಪ್ರಸ್ತುತವಾಗಿ ದೇಶ ವಿಜ್ಞಾನ, ತಂತ್ರಜ್ಞಾನ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಬಗಳ ವೇಗವಾಗಿ ಬೆಳೆಯುತ್ತಿದೆ. ಆನ್ ಲೈನ್ ವ್ಯವಸ್ಥೆಯಿಂದ ಡಿಜಿಟಲೈಜೇಶನ್ ನಲ್ಲಿ ಮಹತ್ತರ ಬದಲಾವಣೆಯಾಗುತ್ತಿದೆ ಎಂದು ಹೇಳಿದರು. ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಪದವಿ, ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಮೊದಲ ರ‍್ಯಾಂಕ್ ಪಡೆದ 13 ವಿದ್ಯಾರ್ಥಿಗಳು ಚಿನ್ನ ಮತ್ತು ದ್ವಿತೀಯ ರ‍್ಯಾಂಕ್ ಪಡೆದ 15 ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಪದವಿಯ 1,293 ಮತ್ತು ಸ್ನಾತಕೋತ್ತರದ 306 ಸೇರಿದಂತೆ 1599 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ಪ್ರದಾನ ಮಾಡಲಾಯಿತು. ಕಾಲೇಜಿನ ಮೂವರು ಪ್ರಾಧ್ಯಾಪಕರು ಸೇರಿದಂತೆ 9 ಜನರಿಗೆ ಪಿಎಚ್.ಡಿ ಪ್ರದಾನ ಮಾಡಲಾಯಿತು.