ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಲು ಭಾರತಕ್ಕೆ ಬೇಕಿರೋದು ಎರಡೇ ವರ್ಷ: ಡಾ. ಎನ್.ಎಸ್.ನವೀನ್ ಕುಮಾರ್

ಹೊಸದಿಗಂತ ವರದಿ ಮಡಿಕೇರಿ:

ಇನ್ನು ಎರಡು ವರ್ಷಗಳಲ್ಲಿ ಚೀನಾವನ್ನೂ ಮೀರಿಸಿ ಭಾರತ ದೇಶವು ಜಗತ್ತಿನಲ್ಲಿಯೇ ಅತ್ಯಧಿಕ ಜನಸಂಖ್ಯೆ ಇರುವ ದೇಶವಾಗಲಿದೆ. ಕೆಲವೊಂದು ಪ್ರತಿಕೂಲ ಪರಿಣಾಮಗಳನ್ನು ಎದುರಿಸುವ ಸವಾಲು ಎದುರಾಗಲಿದೆ ಎಂದು ಮಡಿಕೇರಿಯ ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯಾಧಿಕಾರಿ ಡಾ.ಎನ್.ಎಸ್. ನವೀನ್ ಕಳವಳ ವ್ಯಕ್ತಪಡಿಸಿದ್ದಾರೆ.

ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಜನಸಂಖ್ಯಾ ದಿನಾಚರಣೆಯ ಸಂದರ್ಭ ಈವರೆಗೆ 15 ಸಾವಿರದಷ್ಟು ಉದರದರ್ಶಕ ಕುಟುಂಬ ಕಲ್ಯಾಣ ಮತ್ತು ವಾಸೆಕ್ಟಮಿ ಶಸ್ತ್ರಚಿಕಿತ್ಸೆ ನಡೆಸಿದ ಕೀರ್ತಿಗೆ ಡಾ.ಎನ್.ಎಸ್. ನವೀನ್ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಮಾತನಾಡಿದ ಡಾ.ನವೀನ್, ಭಾರತ ದೇಶವು ವರ್ಷದಿಂದ ವರ್ಷಕ್ಕೆ ಜನಸಂಖ್ಯಾ ಸ್ಫೋಟವನ್ನು ಕಾಣುತ್ತಿದೆ. ಇದರಿಂದ ಆಹಾರ, ಉದ್ಯೋಗ ಕ್ಷೇತ್ರ ಸೇರಿದಂತೆ ವಿವಿಧ ರಂಗಗಳಲ್ಲಿ ಸಮಸ್ಯೆ ಎದುರಿಸುವಂತಾಗಿದೆ. ಬಡತನ ನಿರ್ಮೂಲನೆಯ ಉದ್ದೇಶ ಕೂಡಾ ಜನಸಂಖ್ಯಾ ನಿಯಂತ್ರಣದಲ್ಲಿದೆ ಎಂದರು.

ಲಿಂಗ ಸಮಾನತೆಯ ಶಕ್ತಿಯ ಮಾಹಿತಿ ನೀಡುವುದೇ ಈ ವರ್ಷದ ಘೋಷ ವಾಕ್ಯವಾಗಿದೆ. ಜಗತ್ತಿನಲ್ಲಿ ಪ್ರಸ್ತುತ 800 ಕೋಟಿ ಜನರಿದ್ದು ಈ ಪೈಕಿ 140 ಕೋಟಿ, ಜನ ಭಾರತದಲ್ಲಿದ್ದರೆ, 142 ಕೋಟಿ ಜನರು ಚೀನಾ ದೇಶದಲ್ಲಿದ್ದಾರೆ. ಇನ್ನೆರಡು ವರ್ಷಗಳಲ್ಲಿ ಜನಸಂಖ್ಯೆಯಲ್ಲಿ ವಿಶ್ವದಲ್ಲಿಯೇ ಭಾರತ ಮೊದಲ ಸ್ಥಾನ ತಲುಪುವ ಸಾಧ್ಯತೆಯಿದೆ. ಅರಣ್ಯಗಳ ನಾಶ ಕೂಡಾ ಜನಸಂಖ್ಯಾ ಸ್ಫೋಟದ ಪರಿಣಾಮಗಳಲ್ಲೊಂದಾಗಿದೆ. ಇದರಿಂದಾಗಿ ಪ್ರವಾಹ, ಭೂಕುಸಿತದಂತಹ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿದೆ. ಜನಸಂಖ್ಯೆಯ ಹೆಚ್ಚಳ ಆರ್ಥಿಕ ಅಸಮತೋಲನಕ್ಕೆ ಕೂಡಾ ಕಾರಣವಾಗಿದ್ದು, ಜತೆಗೆ ಬಡತನ ಹೆಚ್ಚಳಕ್ಕೂ ಕಾರಣವಾಗಿದೆ ಎಂದೂ ಡಾ.ನವೀನ್ ಕಳವಳ ವ್ಯಕ್ತಪಡಿಸಿದರು.

ಜನಸಂಖ್ಯೆಯ ಹೆಚ್ಚಳದಿಂದಾಗುವ ಪ್ರತಿಕೂಲ ಪರಿಣಾಮಗಳ ಬಗ್ಗೆ ತಿಳಿಸಲು 1989 ರಿಂದ ಪ್ರತೀ ವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತಿದ್ದು, ಸಣ್ಣ ಕುಟುಂಬಗಳಿಗೆ ಇರುವ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ ಈ ದಿನಾಚರಣೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಡಾ.ಎನ್.ಎಸ್. ನವೀನ್ ಮಾಹಿತಿ ನೀಡಿದರು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಮಾತನಾಡಿ, ವೈದ್ಯ ನವೀನ್ ಅವರು ಕಳೆದ 10 ವರ್ಷಗಳಿಂದ ಉದರದರ್ಶಕ ಕುಟುಂಬ ಕಲ್ಯಾಣ ಮತ್ತು ವಾಸೆಕ್ಟಮಿ ಸಂಬಂಧಿಸಿದ 15 ಸಾವಿರಕ್ಕೂ ಅಧಿಕ ಶಸ್ತ್ರಚಿಕಿತ್ಸೆ ಕೈಗೊಂಡು ದಾಖಲೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ರತ್ನಾಕರ್ ರೈ, ಸಹಾಯಕ ಗವರ್ನರ್ ದೇವಣಿರ ತಿಲಕ್, ಡಾ.ರಾಜೇಶ್ವರಿ ನವೀನ್, ಮಿಸ್ಟಿ ಹಿಲ್ಸ್ ಸ್ಥಾಪಕಾಧ್ಯಕ್ಷ ಅನಂತಶಯನ, ನಿಕಟಪೂರ್ವ ಅಧ್ಯಕ್ಷ ಪ್ರಸಾದ್ ಗೌಡ, ಮಾಜಿ ಸಹಾಯಕ ಗವರ್ನರ್’ಗಳಾದ ಡಾ.ಪ್ರಶಾಂತ್, ಬಿ.ಕೆ.ರವೀಂದ್ರ ರೈ, ಅನಿಲ್ ಎಚ್.ಟಿ. ಮಿಸ್ಟಿ ಹಿಲ್ಸ್ ನಿರ್ದೇಶಕರಾದ ಶ್ರೀಹರಿ, ಎ.ಕೆ.ವಿನೋದ್ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!