ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟ್ ವಿಶ್ವಕಪ್ 2023ರ ಭಾಗವಾಗಿ ಭಾರತ ಕ್ರಿಕೆಟ್ ತಂಡವು ಭಾನುವಾರ ನೆದರ್ಲ್ಯಾಂಡ್ಸ್ ವಿರುದ್ಧ ತಮ್ಮ ಅಂತಿಮ ಲೀಗ್ ಪಂದ್ಯವನ್ನು ಆಡಲಿದೆ. ಇಂದು ಭಾರತ-ನೆದರ್ಲಾಂಡ್ ಎರಡೂ ತಂಡಗಳು ಮುಖಾಮುಖಿಯಾಗಲಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಜರುಗಲಿದೆ.
ಕ್ರಿಕೆಟ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಸ್ಟೇಡಿಯಂ ಸುತ್ತಮುತ್ತ ಬಿಗಿ ಭದ್ರತೆ ಏರ್ಪಡಿಸಿದ್ದು, ಪಾರ್ಕಿಂಗ್ ವ್ಯವಸ್ಥೆಯನ್ನು ನಿಷೇಧಿಸಲಾಗಿದೆ. ಕ್ವೀನ್ಸ್ ರಸ್ತೆ, ಕಬ್ಬನ್ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಲ್ಯಾವೆಲ್ಲಾ ರೋಡ್, ಎಂ.ಜಿ.ರೋಡ್, ರಾಜಭವನ, ಸೆಂಟ್ರಲ್ ಸ್ಟ್ರೀಟ್, ಮ್ಯೂಸಿಯಂ ರೋಡ್, ಕಸ್ತೂರ್ಬಾ ರಸ್ತೆ ಸೇರಿದಂತೆ ಹಲವೆಡೆ ಪಾರ್ಕಿಂಗ್ ಅನ್ನು ನಿಷೇಧಿಸಲಾಗಿದೆ. ನಿಗದಿತ ಸ್ಥಳದಲ್ಲಿ ಮಾತ್ರ ವಾಹನಗಳ ನಿಲುಗಡೆಗೆ ಪೊಲೀಸರು ಅನುಮತಿ ನೀಡಿದ್ದಾರೆ.
ಸ್ಟೇಡಿಯಂ ಸುತ್ತಮುತ್ತ ಪೊಲೀಸ್ ಭದ್ರತೆ
ಮಧ್ಯಾಹ್ನ 2ಗಂಟೆಗೆ ಪಂದ್ಯ ಆರಂಭವಾಗಲಿರುವುದರಿಂದ ಮುನ್ನವೇ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಕ್ರೀಡಾಂಗಣದತ್ತ ಬರುತ್ತಾರೆ. ಹಾಗಾಗಿ ನಾಲ್ವರು ಡಿಸಿಪಿಗಳು ಭದ್ರತೆಯನ್ನ ಜವಾಬ್ದಾರಿಯನ್ನು ಹೊತ್ತಿದ್ದಾರೆ. 9ಜನ ಎಸಿಪಿ, 28ಮಂದಿ ಇನ್ಸ್ಪೆಕ್ಟರ್, 86ಮಂದಿ ಪಿಎಸ್ಐಗಳು, 4 KSRP ತುಕಡಿ ಸೇರಿ 1 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.
ಆಂಬುಲೆನ್ಸ್ ಹಾಗೂ ಅಗ್ನಿಶಾಮಕ ವಾಹನಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಕ್ರೀಡಾಂಗಣದ ಎಲ್ಲಾ ಗೇಟ್‌ಗಳ ಬಳಿ ತೀವ್ರ ತಪಾಸಣೆ ನಡೆಸಲಾಗಿದೆ.