ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತವು ನವೀಕರಣ ಇಂಧನ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಇತ್ತೀಚೆಗೆ ನಡೆದ ಇಂಟರ್ನ್ಯಾಷನಲ್ ಸೋಲಾರ್ ಅಲಾಯನ್ಸ್ ಅಸೆಂಬ್ಲಿಯ 8ನೇ ಅಧಿವೇಶನದಲ್ಲಿ ಮಾತನಾಡಿದ ಕೇಂದ್ರ ನವೀಕರಣ ಇಂಧನ ಸಚಿವ ಪ್ರಲ್ಹಾದ್ ಜೋಷಿ ಅವರು ಈ ಕುರಿತು ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡರು.
ಸದ್ಯ ಭಾರತದಲ್ಲಿ 257 ಗಿಗಾವ್ಯಾಟ್‌ನಷ್ಟು ನವೀಕರಣ ಇಂಧನ ಸಾಮರ್ಥ್ಯ ಇದೆ. 2014ರಲ್ಲಿ ಇದು ಕೇವಲ 81 ಗಿ.ವ್ಯಾ. ಇತ್ತು. ಅಂದರೆ, ಕೇವಲ 11 ವರ್ಷಗಳಲ್ಲಿ ಈ ಸಾಮರ್ಥ್ಯ ಮೂರು ಪಟ್ಟು ಹೆಚ್ಚಾಗಿದೆ.
ಅತಿಹೆಚ್ಚು ಮರುಬಳಕೆ ಇಂಧನ ತಯಾರಿಕೆಯ ಸಾಮರ್ಥ್ಯ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 4ನೇ ಸ್ಥಾನ ದೊರಕಿದೆ.
ಅತ್ಯಂತ ಗಮನಾರ್ಹ ಸಂಗತಿ ಎಂದರೆ, ಭಾರತವು 2030ಕ್ಕೆ ನಿಗದಿ ಮಾಡಲಾದ ನವೀಕರಣ ಇಂಧನ ಗುರಿಯನ್ನು 2021ರಲ್ಲೇ ಸಾಧಿಸಿ ಮುಂದುವರಿದಿದೆ. ಈ ಗುರಿಯನ್ನು ಇಷ್ಟು ಕ್ಷಿಪ್ರ ವೇಗದಲ್ಲಿ ಮುಟ್ಟಿದ ಜಿ20 ಗುಂಪಿನ ಏಕೈಕ ದೇಶ ಭಾರತ ಎನಿಸಿದೆ.
ಸೌರಶಕ್ತಿ ಉತ್ಪಾದನೆಯಲ್ಲಿ ಹೊಸ ಮನ್ವಂತರ:
ಭಾರತವು ಸೌರಶಕ್ತಿ ಉತ್ಪಾದನೆಯಲ್ಲಿ ಜಾಗತಿಕ ಮಟ್ಟದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. 2014ರಲ್ಲಿ ಭಾರತದ ಸೌರಶಕ್ತಿ ತಯಾರಿಕೆಯ ಸಾಮರ್ಥ್ಯ ಕೇವಲ 2.8 ಗಿ.ವ್ಯಾ. ಇತ್ತು. ಸದ್ಯ ಈ ಸಾಮರ್ಥ್ಯ 128 ಗಿ.ವ್ಯಾ.ಗೆ ಏರಿದೆ. ಅಂದರೆ, ಕೇವಲ 11 ವರ್ಷಗಳಲ್ಲಿ ಸೌರಶಕ್ತಿ ಸಾಮರ್ಥ್ಯ ಬರೋಬ್ಬರಿ 45 ಪಟ್ಟು ಹೆಚ್ಚಾಗಿದೆ. ಜಾಗತಿಕವಾಗಿ ಸೌರಶಕ್ತಿ ಉತ್ಪಾದನಾ ಸಾಮರ್ಥ್ಯ 1,600 ಗಿ.ವ್ಯಾ.ಗಿಂತಲೂ ಹೆಚ್ಚಿದ್ದು, ಒಟ್ಟಾರೆ ನವೀಕರಣ ಇಂಧನದಲ್ಲಿ ಸೌರಶಕ್ತಿಯ ಪಾಲು ಶೇ. 40ರಷ್ಟಿದೆ.
ಕಳೆದ ಐದು ವರ್ಷಗಳಲ್ಲಿ ಒಟ್ಟಾರೆ ವಿದ್ಯುತ್ ತಯಾರಿಕೆಯ ಸಾಮರ್ಥ್ಯ ಹೆಚ್ಚಳದಲ್ಲಿ ಭಾರತವು ಮೂರನೇ ಸ್ಥಾನದಲ್ಲಿದೆ. ಇಂಟರ್ನ್ಯಾಷನಲ್ ಎನರ್ಜಿ ಏಜೆನ್ಸಿ (IEA) ಅಂದಾಜಿನ ಪ್ರಕಾರ, ಮುಂಬರುವ ವರ್ಷಗಳಲ್ಲಿ ಭಾರತವು ವಿಶ್ವದ ಎರಡನೇ ಅತಿದೊಡ್ಡ ನವೀಕರಣ ಇಂಧನ ಮಾರುಕಟ್ಟೆಯಾಗಿ ಹೊರಹೊಮ್ಮಲಿದೆ.
ಪ್ರತಿ ವ್ಯಕ್ತಿಯ ಲೆಕ್ಕದಲ್ಲಿ ಅತಿ ಕಡಿಮೆ ಮಾಲಿನ್ಯ ಹೊರಸೂಸುವಿಕೆ ಮತ್ತು ಅತೀ ಕಡಿಮೆ ಇಂಧನ ಬಳಕೆ ಹೊಂದಿರುವ ದೇಶಗಳ ಪೈಕಿ ಭಾರತ ಇದ್ದರೂ, ಶುದ್ಧ ಇಂಧನ ಮೂಲಗಳಿಗೆ ಬದಲಾಗಲು ಭಾರತ ತೋರಿರುವ ಬದ್ಧತೆಯನ್ನು ಜಾಗತಿಕ ಸಮುದಾಯ ಶ್ಲಾಘಿಸಿದೆ ಎಂದು ಸಚಿವರು ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.

