ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ‘ಆಪರೇಷನ್ ಸಿಂದೂರ’ ನಂತರ, ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತ ಪಾಕಿಸ್ತಾನ ವಿರುದ್ಧ ಸಂಪೂರ್ಣ ಬಹಿಷ್ಕಾರ ಘೋಷಿಸಬೇಕೆಂಬ ಬೇಡಿಕೆ ಜೋರಾಗಿದೆ. ಇತ್ತೀಚಿನ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ನಲ್ಲಿ ಭಾರತೀಯ ದಿಗ್ಗಜ ಕ್ರಿಕೆಟಿಗರು ಪಾಕಿಸ್ತಾನ ವಿರುದ್ಧ ಆಡಲು ನಿರಾಕರಿಸಿದ ಉದಾಹರಣೆ ಹೊಸ ಚರ್ಚೆಗೆ ಕಾರಣವಾಗಿದೆ. ಶಿಖರ್ ಧವನ್, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ಸುರೇಶ್ ರೈನಾ, ಯೂಸುಫ್ ಪಠಾಣ್ ಮೊದಲಾದ ಮಾಜಿ ಆಟಗಾರರು ಪಾಕಿಸ್ತಾನ ತಂಡವನ್ನು ಎದುರಿಸಲು ಸ್ಪಷ್ಟವಾಗಿ ನಿರಾಕರಿಸಿದ್ದರು.
ಈಗ ಇದೇ ರೀತಿಯ ನಿಲುವನ್ನು ಮುಂಬರುವ ಏಷ್ಯಾ ಕಪ್‌ನಲ್ಲೂ ಕೈಗೊಳ್ಳಬೇಕೆಂದು ಭಾರತದ ಮಾಜಿ ಸ್ಪಿನ್ ಮಾಸ್ಟರ್ ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. 700 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಿಕೆಟ್ ಪಡೆದ ಹರ್ಭಜನ್, “ದೇಶದ ಭದ್ರತೆಗೆ ಹೋಲಿಸಿದರೆ ಕ್ರಿಕೆಟ್ ಅತೀ ಚಿಕ್ಕ ವಿಷಯ. ಗಡಿಯಲ್ಲಿ ದಿನರಾತ್ರಿ ಸೇವೆ ಸಲ್ಲಿಸುವ ಸೈನಿಕರ ತ್ಯಾಗವು ನಮಗೆಲ್ಲರಿಗೂ ಮಾದರಿ” ಎಂದು ಹೇಳಿದರು.
ಗಡಿಯಲ್ಲಿ ಉದ್ವಿಗ್ನತೆ ಇರುವಾಗ ಕ್ರಿಕೆಟ್ ಮೂಲಕ ಸಂಬಂಧ ಬೆಳೆಸುವುದು ಸರಿಯಲ್ಲ. ಎಲ್ಲಾ ಗೊಂದಲ ಬಗೆಹರಿಯುವವರೆಗೆ ಪಾಕಿಸ್ತಾನ ವಿರುದ್ಧ ಪಂದ್ಯವಾಡಬಾರದು. ರಕ್ತ ಮತ್ತು ನೀರು ಒಟ್ಟಿಗೆ ಹರಿಯುವುದಿಲ್ಲ ಎಂಬುದು ನಮ್ಮ ಸರ್ಕಾರದ ನಿಲುವು ಎಂದು ಸ್ಪಷ್ಟಪಡಿಸಿದರು.
ಏಷ್ಯಾ ಕಪ್‌ನಲ್ಲಿ ಭಾರತ, ಪಾಕಿಸ್ತಾನ, ಯುಎಇ ಮತ್ತು ಒಮಾನ್ ಒಂದೇ ಗುಂಪಿನಲ್ಲಿ ಇರಲಿದ್ದು, ಲೀಗ್ ಹಂತದ ನಂತರ ಭಾರತ-ಪಾಕ್ ಮತ್ತೊಮ್ಮೆ ಸೆಣಸಿಕೊಳ್ಳುವ ಸಾಧ್ಯತೆ ಇದೆ. ಎರಡೂ ತಂಡಗಳು ಫೈನಲ್ ತಲುಪಿದರೆ, ಒಂದೇ ಟೂರ್ನಿಯಲ್ಲಿ ಮೂರು ಬಾರಿ ಮುಖಾಮುಖಿ ಆಗುವ ಪರಿಸ್ಥಿತಿ ಎದುರಾಗಲಿದೆ.
ಹರ್ಭಜನ್ ಸಿಂಗ್ ಹೇಳಿಕೆ ಕ್ರಿಕೆಟ್ ಅಭಿಮಾನಿಗಳಲ್ಲಿ ವಿಭಿನ್ನ ಪ್ರತಿಕ್ರಿಯೆ ಹುಟ್ಟುಹಾಕಿದ್ದು, ಕ್ರೀಡೆ ಮತ್ತು ದೇಶಭಕ್ತಿಯ ನಡುವಿನ ಸಮತೋಲನದ ಚರ್ಚೆಗೆ ಹೊಸ ಬಣ್ಣ ತುಂಬಿದೆ. ಏಷ್ಯಾ ಕಪ್‌ನಲ್ಲಿ ಭಾರತ-ಪಾಕ್ ಪಂದ್ಯ ನಡೆಯುತ್ತದೆಯೇ ಇಲ್ಲವೇ ಎಂಬುದು ಇದೀಗ ಕ್ರೀಡಾಭಿಮಾನಿಗಳ ಮುಂದಿರುವ ಪ್ರಶ್ನೆಯಾಗಿದೆ.