ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹಾಗೂ ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಮಾತುಕತೆಯೇ ಪ್ರಮುಖ ಮಾರ್ಗ ಎಂಬ ಆರ್‌ಎಸ್‌ಎಸ್ ನಾಯಕ ದತ್ತಾತ್ರೇಯ ಹೊಸಬಾಳೆ ನೀಡಿದ ಹೇಳಿಕೆಗೆ ಪಾಕಿಸ್ತಾನದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಸ್ವಾಗತ ವ್ಯಕ್ತಪಡಿಸಿದ್ದಾರೆ.
ಸಂವಿಧಾನದ ಚೌಕಟ್ಟಿನಲ್ಲಿಯೇ ಸಾಧ್ಯ
ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಹೊಸಬಾಳೆ ಅವರು ಈಗ ಹೇಳಿರುವುದು ಪಿಡಿಪಿ ಸಂಸ್ಥಾಪಕ, ನನ್ನ ತಂದೆ ಮುಫ್ತಿ ಮೊಹಮ್ಮದ್ ಸಯೀದ್ ಅವರು ತಮ್ಮ ಕೊನೆಯ ಉಸಿರಿರುವವರೆಗೂ ಪ್ರತಿಪಾದಿಸಿದ್ದನ್ನೇ ಆಗಿದೆ. ನಾವು ಚಿನ್ನದ ರಸ್ತೆಗಳನ್ನು ಮತ್ತು ಬೆಳ್ಳಿಯ ಸೇತುವೆಗಳನ್ನು ನಿರ್ಮಿಸಿದರೂ, ಕಾಶ್ಮೀರ ಸಮಸ್ಯೆ ಬಗೆಹರಿಯದಿದ್ದರೆ ಅವುಗಳಿಂದ ಯಾವುದೇ ಪ್ರಯೋಜನವಿಲ್ಲ ಎಂದು ನನ್ನ ತಂದೆ ಹೇಳುತ್ತಿದ್ದರು. ಕಾಶ್ಮೀರ ಸಮಸ್ಯೆಗೆ ಶಾಶ್ವತ ಪರಿಹಾರ ಮಾತುಕತೆ ಮತ್ತು ಸಂವಿಧಾನದ ಚೌಕಟ್ಟಿನಲ್ಲಿಯೇ ಸಾಧ್ಯವಿದೆ. ಜೊತೆಗೆ ಜಮ್ಮು ಮತ್ತು ಕಾಶ್ಮೀರದ ಜನರು ಕೂಡ ಶಾಂತಿ ಬಯಸುತ್ತಿದ್ದಾರೆ ಎಂದು ಹೇಳಿದರು.
ಸಮಸ್ಯೆಗೆ ಸಂವಾದವೇ ಪರಿಹಾರ
ತಂದೆ ಮುಫ್ತಿ ಮೊಹಮ್ಮದ್ ಸಯೀದ್ ಕೂಡ ಕಾಶ್ಮೀರ ಸಮಸ್ಯೆಗೆ ಸಂವಾದವೇ ಪರಿಹಾರ ಎಂದು ನಿರಂತರವಾಗಿ ಹೇಳುತ್ತಿದ್ದರು. ಅಭಿವೃದ್ಧಿ ಕಾರ್ಯಗಳು ಅಗತ್ಯವಾದರೂ, ಶಾಶ್ವತ ಶಾಂತಿ ಮಾತುಕತೆಗಳಿಂದಲೇ ಸಾಧ್ಯ ಎಂದು ಅವರು ಪ್ರತಿಪಾದಿಸಿದ್ದರು ಎಂದು ಮೆಹಬೂಬಾ ಮುಫ್ತಿ ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ:
ಕಾಶ್ಮೀರ ಸಮಸ್ಯೆಯ ಪರಿಹಾರಕ್ಕಾಗಿ ನರೇಂದ್ರ ಮೋದಿ ಅವರು ಏನನ್ನೂ ಮಾಡಿಲ್ಲ ಎಂದು ನಾನು ಹೇಳುತ್ತಿಲ್ಲ. ಅವರು ವಿಶ್ವದ ಇತಿಹಾಸದಲ್ಲಿ ತಮ್ಮ ಹೆಸರು ಉಳಿಸಬೇಕೆಂದರೆ ಜಮ್ಮು ಮತ್ತು ಕಾಶ್ಮೀರದ ಜನರೊಂದಿಗೆ ಸಂವಾದ ಆರಂಭಿಸಬೇಕು ಹಾಗೂ ಈ ಪ್ರಕ್ರಿಯೆಯಲ್ಲಿ ಪಾಕಿಸ್ತಾನವನ್ನೂ ಒಳಗೊಳ್ಳಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇತ್ತ ಸೇನಾ ಮಾಜಿ ಮುಖ್ಯಸ್ಥ ಎಂ.ಎಂ. ನರವಣೆ ಅವರೂ ಕೂಡಾ ಹೊಸಬಾಳೆ ಅವರ ಹೇಳಿಕೆಯನ್ನು ಬೆಂಬಲಿಸಿದ್ದು, ಉಭಯ ದೇಶಗಳ ನಡುವೆ ಮಾತುಕತೆ ತುಂಬಾ ಪ್ರಮುಖವಾಗಿದೆ ಎಂದು ಅಭಿಪ್ರಾಯಿಸಿದ್ದಾರೆ.



