ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮವಾಗಿ ಭಾರತವು ಸುಮಾರು 5 ವರ್ಷಗಳ ಅಂತರದ ಬಳಿಕ ಇದೀಗ ಚೀನಾದ ನಾಗರಿಕರಿಗೆ ಪ್ರವಾಸಿ ವೀಸಾ ನೀಡುವುದನ್ನು ಪುನರಾರಂಭಿಸಿದೆ.
ನಾಳೆಯಿಂದ (ಗುರುವಾರದಿಂದ) ಚೀನಾದ ಪ್ರಜೆಗಳು ಪ್ರವಾಸಿ ವೀಸಾಗಳಿಗೆ ಅರ್ಜಿ ಸಲ್ಲಿಸಲು ಪ್ರಾರಂಭಿಸಬಹುದು ಎಂದು ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
‘ಭಾರತವು ಚೀನಾದ ನಾಗರಿಕರಿಗೆ ಪ್ರವಾಸಿ ವೀಸಾಗಳನ್ನು ಪುನರಾರಂಭಿಸುವುದನ್ನು ನಾವು ಗಮನಿಸಿದ್ದೇವೆ. ಇದು ಸಕಾರಾತ್ಮಕ ಕ್ರಮವಾಗಿದೆ. ಗಡಿಯಾಚೆಗಿನ ಪ್ರಯಾಣವನ್ನು ಸರಾಗಗೊಳಿಸಲು ಇದು ಪ್ರಯೋಜನಕಾರಿಯಾಗಿದೆ. ಎರಡೂ ದೇಶಗಳ ನಡುವಿನ ಪ್ರಯಾಣವನ್ನು ಮತ್ತಷ್ಟು ಸುಗಮಗೊಳಿಸಲು ಚೀನಾ ಭಾರತದೊಂದಿಗೆ ಸಂವಹನ ಮತ್ತು ಸಮಾಲೋಚನೆಯನ್ನು ನಿರ್ವಹಿಸುತ್ತದೆ’ ಎಂದು ಚೀನಾದ ವಿದೇಶಾಂಗ ಸಚಿವಾಲಯ ಎಕ್ಸ್ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದೆ.
ಭಾರತೀಯ ರಾಯಭಾರ ಕಚೇರಿಯು ತನ್ನ ಅಧಿಸೂಚನೆಯಲ್ಲಿ ಪ್ರವಾಸಿ ವೀಸಾಗಳಿಗೆ ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ಪ್ರಕ್ರಿಯೆ, ಬೀಜಿಂಗ್, ಶಾಂಘೈ ಮತ್ತು ಗುವಾಂಗ್‌ಝೌನಲ್ಲಿರುವ ಭಾರತೀಯ ವೀಸಾ ಅರ್ಜಿ ಕೇಂದ್ರಗಳಲ್ಲಿ ಚೀನೀ ಪ್ರಜೆಗಳು ಸಲ್ಲಿಸಬೇಕಾದ ದಾಖಲೆಗಳನ್ನು ಸಹ ವಿವರಿಸಿದೆ.
ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರ ಚೀನಾ ಭೇಟಿಯ ನಂತರ ಚೀನಾದ ಪ್ರಜೆಗಳಿಗೆ ಪ್ರವಾಸಿ ವೀಸಾ ನೀಡುವುದನ್ನು ಪುನರಾರಂಭಿಸುವ ಕ್ರಮ ಕೈಗೊಳ್ಳಲಾಗಿದೆ.