ಹೊಸದಿಗಂತ ಡಿಜಿಟಲ್ ಡೆಸ್ಕ್
ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಜಮ್ಮು ಮತ್ತು ಕಾಶ್ಮೀರ ಭೇಟಿ ಕುರಿತು ಟೀಕಿಸಿದ್ದ ಪಾಕಿಸ್ತಾನವನ್ನು ಭಾರತವು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ನಮ್ಮ ಆಂತರಿಕ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಲು ಪಾಕ್ ಗೆ ಯಾವುದೇ ಹಕ್ಕಿಲ್ಲ, ಇಂತಹ ಪ್ರತಿಕ್ರಿಯೆಗಳನ್ನು ಭಾರತ ಸಹಿಸುವುದಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಸ್ಪಷ್ಟ ಪದಗಳಲ್ಲಿ ಎಚ್ಚರಿಸಿದ್ದಾರೆ.
ಏಪ್ರಿಲ್ 23 ರಂದು ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಆರ್ಟಿಕಲ್ 370 ರದ್ದಾದ ನಂತರ ಕಣಿವೆ ರಾಜ್ಯಕ್ಕೆ ಇದು ಅವರ ಮೊದಲ ಭೇಟಿಯಾಗಿತ್ತು. ಈ ವೇಳೆ ಅವರು 20,000 ಕೋಟಿಗೂ ಹೆಚ್ಚಿನ ಮೊತ್ತದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಹಲವಾರು ಯೋಜನೆಗಳಿಗೆ ಅಡಿಪಾಯ ಹಾಕಿದ್ದರು.
ಈ ಭೇಟಿಯ ಕುರಿತು ಪ್ರತಿಕ್ರಿಯಿಸಿದ್ದ ಪಾಕಿಸ್ತಾನ, ಕಾಶ್ಮೀರದಲ್ಲಿ ಬೃಹತ್ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಮೂಲಕ ಭಾರತವು ಕಾಶ್ಮೀರದಲ್ಲಿ ʼಎಲ್ಲವೂ ಸರಿಯಾಗಿದೆ ʼ ಕಣಿವೆ ರಾಜ್ಯದಲ್ಲಿ ಸಾಮಾನ್ಯ ಸ್ಥಿತಿ ಸ್ಥಾಪಿತವಾಗಿದೆʼ ಎಂದು ಬಿಂಬಿಸಲು ಹತಾಶ ಪ್ರಯತ್ನ ನಡೆಸುತ್ತಿದೆ. ನಾವು ಎಂದಿಗೂ ಕಾಶ್ಮೀರಿಗಳ ಪರ ನಿಲ್ಲುತ್ತೇವೆ ಎಂದು ಹೇಳಿಕೆ ನೀಡುವ ಮೂಲಕ ಕೆಣಕಿತ್ತು.
ಈ ಕುರಿತು ತಿರುಗೇಟು ನೀಡಿರುವ ಬಾಗ್ಚಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಣಿವೆ ರಾಜ್ಯದಲ್ಲಿ ಪಡೆದ ಸ್ವಾಗತ, ನೀವು ನೋಡಿದ ದೃಶ್ಯಗಳು ಮತ್ತು ಆ ನೆಲದಲ್ಲಿ ನಡೆದಿರುವ ಬದಲಾವಣೆಗಳು ನಿಮ್ಮೆಲ್ಲಾ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರವಾಗಿದೆ. ಪ್ರಧಾನಿಯವರ ಭೇಟಿಯ ಬಗ್ಗೆ, ಜಮ್ಮು ಮತ್ತು ಕಾಶ್ಮೀರದ ವಿಚಾರದ ಬಗ್ಗೆ ಮೂಗು ತೂರಿಸಲು ಪಾಕ್ ಗೆ ನಾವು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ