ಹೊಸದಿಗಂತ ಡಿಜಿಟಲ್ ಡೆಸ್ಕ್:
ಇರಾನ್ ಕೆಲವು ನಿರ್ಣಾಯಕ ಸಮಯದಲ್ಲಿ ಭಾರತವನ್ನು ಬೆಂಬಲಿಸಿದ್ದು, ಕಚ್ಚಾ ತೈಲದ ಶೇಕಡಾ 50 ರಷ್ಟು ಇರಾನ್‌ನಿಂದ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಇರಾನ್-ಇಸ್ರೇಲ್ ಯುದ್ಧದಲ್ಲಿ ಭಾರತ ಸರ್ಕಾರ ಇರಾನ್ ರಾಷ್ಟ್ರವನ್ನು ಬೆಂಬಲಿಸಬೇಕು ಎಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರೂ ಆಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಇರಾನ್ -ಇಸ್ರೇಲ್ ನಡುವೆ ಯುದ್ಧ ನಡೆಯುತ್ತಿದ್ದು, ಅಮೆರಿಕ ಇಸ್ರೇಲ್ ಪರ ಮಧ್ಯ ಪ್ರವೇಶಿಸಿ ಯುದ್ಧಕ್ಕೆ ಇಳಿದಿದೆ. ವಿಶ್ವದಾದ್ಯಂತ ಯುದ್ಧ ನಡೆದರೆ ಪ್ರಪಂಚದಲ್ಲಿ ಅಶಾಂತಿ ಸೃಷ್ಠಿಯಾಗುತ್ತದೆ. ಯುದ್ಧಬೇಡವೆಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಈಗಾಗಲೇ ಮಾಧ್ಯಮಗಳ ಮೂಲಕ ಮನವಿ ಮಾಡಿದ್ದಾರೆ. ವಿಶ್ವ ಗುರು ಎಂದು ಪ್ರಚಾರ ಪಡೆಯುವ ದೇಶದ ಪ್ರಧಾನಿ ಮೋದಿಯವರು, ವಿವಿಧ ರಾಷ್ಟ್ರಗಳಿಗೆ ಭೇಟಿ ನೀಡುವುದರಿಂದ ಹಾಗೂ ಅನೇಕ ದೇಶಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆಂದು ಹೇಳಲಾಗುವುದರಿಂದ, ಯುದ್ಧವನ್ನು ನಿಲ್ಲಿಸಲು ಪ್ರಯತ್ನಿಸಬೇಕೆಂದು ಹೇಳಿದ್ದಾರೆ.