ಹೊಸದಿಗಂತ ಡಿಜಿಟಲ್ ಡೆಸ್ಕ್:
ಟರ್ಕಿಯಲ್ಲಿ ಸಂಭವಿಸಿದ ಭೂಕಂಪದಿಂದ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ಹಾನಿಗೆ ಪ್ರಧಾನಿ ಮೋದಿ ದುಃಖಿತರಾಗಿದ್ದಾರೆ. ಟರ್ಕಿ ಜನರೊಂದಿಗೆ ಭಾರತ ನಿಂತಿದೆ ಎಂಬ ಧೈರ್ಯದ ಸಂದೇಶ ಕಳುಹಿಸಿದ್ದಾರೆ.
ಸೋಮವಾರ ಟರ್ಕಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಭವಿಸಿದ ಭೂಕಂಪದಿಣದ 100 ಕ್ಕೂ ಹೆಚ್ಚು ಜೀವಗಳು ಬಲಿಯಾಗಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಟರ್ಕಿಯಲ್ಲಿನ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿಗೆ ತೀವ್ರ ದುಃಖ ವ್ಯಕ್ತಪಡಿಸಿದ ಪ್ರಧಾನಿ, ʻಈ ಕಠಿಣ ಸಮಯದಲ್ಲಿ ಭಾರತವು ಟರ್ಕಿಯೊಂದಿಗೆ ಒಗ್ಗಟ್ಟಿನಿಂದ ನಿಂತಿದೆ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ. ಈ ದುರಂತವನ್ನು ನಿಭಾಯಿಸಲು ಸಾಧ್ಯವಿರುವ ಎಲ್ಲ ನೆರವು ನೀಡಲು ಸಿದ್ಧವಾಗಿದೆʼ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಸೋಮವಾರ ಟರ್ಕಿಯ ಗಾಜಿಯಾಂಟೆಪ್ ಪ್ರಾಂತ್ಯದ ನೂರ್ಡಗಿಯ ಪೂರ್ವಕ್ಕೆ 23 ಕಿಲೋಮೀಟರ್ (14.2 ಮೈಲಿ) ದೂರದಲ್ಲಿ ಸಂಭವಿಸಿದ ಮಾರಣಾಂತಿಕ ಭೂಕಂಪದ ನಂತರ ಟರ್ಕಿಯ ಏಳು ಪ್ರಾಂತ್ಯಗಳಲ್ಲಿ ಕನಿಷ್ಠ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ರಕ್ಷಣಾ ತಂಡಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿವೆ.
ಇದಲ್ಲದೆ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಕೂಡ ಟ್ವೀಟ್ ಮಾಡಿ ಟರ್ಕಿ ಮತ್ತು ಸಿರಿಯಾ ಎರಡನ್ನೂ ತಲ್ಲಣಗೊಳಿಸಿದ ದುರಂತ ಭೂಕಂಪದಲ್ಲಿ ಜೀವಹಾನಿಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.
“ಟರ್ಕಿಯಲ್ಲಿನ ಭೂಕಂಪದಲ್ಲಿ ಜೀವಹಾನಿ ಮತ್ತು ಹಾನಿಯಿಂದ ತೀವ್ರ ದುಃಖಿತನಾಗಿದ್ದೇನೆ” ಎಂದು ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ.