ನಭಕ್ಕೇರಲು ಸಜ್ಜಾಗಿದೆ ಭಾರತ-ಅಮೆರಿಕ ಜಂಟಿ ನಿರ್ಮಿತ ಉಪಗ್ರಹ ʼನಿಸಾರ್‌ʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ʼಇಸ್ರೋʼ(ISRO) ಹಾಗು ಅಮೆರಿಕದ ʼನಾಸಾʼ (NASA) ಸಂಸ್ಥೆಗಳು ಮೊದಲಬಾರಿಗೆ ಜಂಟಿಯಾಗಿ ಬಾಹ್ಯಾಕಾಶ ಯೋಜನೆಯೊಂದರಲ್ಲಿ ಕೆಲಸ ಮಾಡುತ್ತಿದ್ದು ಉಪಗ್ರಹವೊಂದನ್ನು ಕಕ್ಷೆಗೇರಿಸಲು ಸಿದ್ಧತೆಗಳಾಗುತ್ತಿವೆ. ʼನಿಸಾರ್‌ʼ (NISAR) ಎಂದು ನಾಮಕರಣವಾಗಿರೋ ಈ ಬಾಹ್ಯಾಕಾಶ ಯೋಜನೆಯು ಭೂಮಿಯ ಹವಾಮಾನ ಬದಲಾವಣೆಗಳ ಕುರಿತು ಹೆಚ್ಚಿನ ಅಧ್ಯಯನಕ್ಕೆ ಸಹಾಯಕವಾಗಲಿರೋ ಉಪಗ್ರಹವನ್ನು ಆಕಾಶಕ್ಕೇರಿಸುವ ಗುರಿ ಹೊಂದಿದೆ.

ಇತ್ತೀಚೆಗೆ ಅಮೆರಿಕದ ನಾಸಾದ ಪ್ರಯೋಗಾಲಯವೊಂದರಲ್ಲಿ ಈ ಸಂಬಂಧ ಮಹತ್ವದ ಬೆಳವಣಿಗೆಯಾಗಿದ್ದು ನಾಸಾ ಹಾಗು ಇಸ್ರೋಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರೋ ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್ (NISAR)ನ ಮಾದರಿ ಸಿದ್ಧವಾಗಿದ್ದು ಇದು ಭಾರತಕ್ಕೆ ಪ್ರಯಾಣ ಬೆಳೆಸಲಿದ್ದು ಈ ಸಂಬಂಧ ಭಾರತೀಯ ವಿಜ್ಞಾನಿಗಳು ಹಾಗು ಅಮೆರಿಕದ ವಿಜ್ಞಾನಿಗಳ ನಡುವೆ ಹಸ್ತಾಂತರ ಪ್ರಕ್ರಿಯೆ ನಡೆದಿದ್ದು ಸಾಂಪ್ರದಾಯಿಕ ಶೈಲಿಯಲ್ಲಿ ಪರಸ್ಪರ ಶುಭ ಕೋರಲಾಗಿದೆ. ನಾಸಾದ ಪ್ರಯೋಗಾಲಯದಲ್ಲಿ ಭಾರತೀಯ ಸಂಪ್ರದಾಯದಂತೆ ತೆಂಗಿನಕಾಯಿ ಒಡೆಯುವ ಮೂಲಕ ಈ ಕಾರ್ಯಕ್ಕೆ ಶುಭಕೋರಲಾಗಿದ್ದರೆ ಅಮೆರಿಕದ ವಿಜ್ಞಾನಿಗಳು ʼಲಕ್ಕಿ ಪೀನಟ್ಸ್‌ʼ ಹಂಚಿಕೊಳ್ಳುವ ಮೂಲ ಶುಭ ಹಾರೈಸಿದ್ದಾರೆ.

ಏನಿದು ನಿಸಾರ್‌ ?

ಇದು ಅಮೆರಿಕ ಹಾಗು ಭಾರತದ ಬಾಹ್ಯಾಕಾಶ ಸಂಸ್ಥೆಗಳು ಜಂಟಿಯಾಗಿ ಅಭಿವೃದ್ಧಿ ಪಡಿಸಿರೋ ಉಪಗ್ರಹ ಆಧಾರಿತ ಸಂಶೋಧನಾ ವ್ಯವಸ್ಥೆಯಾಗಿದ್ದು ಭೂಮಿಯ ನೆಲ ಹಾಗು ಹಿಮಗಡ್ಡೆಗಳಲ್ಲಿನ ಬದಲಾವಣೆ ಇತ್ಯಾದಿಗಳನ್ನೊಳಗೊಂಡ ಹವಾಮಾನ ಅಧ್ಯನಕ್ಕೆ ಸಹಾಯಕವಾಗಲಿದೆ. 2021ರಿಂದಲೂ ಅಮೆರಿಕದ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯಲ್ಲಿ ಉಭಯ ದೇಶಗಳ ವಿಜ್ಞಾನಿಗಳು ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಇದೀಗ ಈ ಯೋಜನೆಯ ಪ್ರಮುಖ ʼನಿಸಾರ್ʼ ಉಪಗ್ರಹವನ್ನು ಅಭಿವೃದ್ಧಿಪಡಿಸಲಾಗಿದ್ದು ಇದು ಭಾರತಕ್ಕೆ ಪ್ರಯಾಣ ಬೆಳೆಸಲಿದೆ. ಇದು ಎಲ್ಲಾ ಹವಾಮಾನ, ಹಗಲು ಮತ್ತು ರಾತ್ರಿ ಬಾಹ್ಯಾಕಾಶದಿಂದ ಚಿತ್ರಗಳನ್ನು ತೆಗಯುವ ಸಾಮರ್ಥ್ಯವನ್ನು ಹೊಂದಿದ್ದು ಇದು ಭಾರತೀಯ ಉಡ್ಡಯನ ವಾಹನದ ಮೂಲಕ ಬಾಹ್ಯಾಕಾಶವನ್ನು ತಲುಪಲಿದೆ.

ಭೂಕಂಪಗಳು, ಭೂಕುಸಿತಗಳು ಮತ್ತು ಜ್ವಾಲಾಮುಖಿ ಸ್ಫೋಟ ಇತ್ಯಾದಿಗಳು ಸಂಭವಿಸುವ ಸಂದರ್ಭದಲ್ಲಿ ಮುಂಚಿತವಾಗಿ ದೊರೆಯುವ ಕೆಲ ಸೂಚನೆಗಳ ಕುರಿತು ಅವಲೋಕಿಸಲು, ಮಂಜುಗಡ್ಡೆಗಳ ಕರಗುವಿಕೆ, ಸಮುದ್ರ ಮಟ್ಟದಲ್ಲಿ ಏರಿಕೆಯಂತ ವಿದ್ಯಮಾನಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಲು ಇದು ಸಹಾಯಕವಾಗಲಿದೆ. ಈ ನಿಸಾರ್‌ ಉಪಗ್ರಹವು 12 ದಿನಗಳಿಗೊಮ್ಮೆ ಇಡೀ ಭೂಮಿಯನ್ನು ವೀಕ್ಷಿಸಲು ಸಹಾಯ ಮಾಡಲಿದೆ. ಪ್ರಸ್ತುತ ಈ ಉಪಗ್ರಹದ ಮಾದರಿ ತಯಾರಾಗಿದ್ದು ಇದನ್ನು ಭಾರತದ ಬೆಂಗಳೂರಿನಲ್ಲಿರುವ ಯುಆರ್‌ ರಾವ್‌ ಉಪಗ್ರಹ ಕೇಂದ್ರಕ್ಕೆ ತರಲಾಗುತ್ತದೆ. ಒಂದಿಷ್ಟು ಅಭಿವೃದ್ಧಿ ಕಾರ್ಯಗಳ ನಂತರ ಅಲ್ಲಿಂದ ಆಂಧ್ರಪ್ರದೇಶ ರಾಜ್ಯದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 2024ರಲ್ಲಿ ಇದು ಉಡಾವಣೆಯಾಗಿ ಕಕ್ಷೆಗೆ ಸೇರಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!