ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಹೆಡಿಂಗ್ಲೆ ಟೆಸ್ಟ್ನ ಮೂರನೇ ದಿನ ಮಳೆಯ ಕಾರಣ ನಿಗದಿತ ವೇಳೆಗೆ ಪಂದ್ಯ ಪೂರ್ಣಗೊಳ್ಳದೆ ಬೇಗ ಅಂತ್ಯಗೊಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 471 ರನ್ ಗಳಿಸಿ ಬಲಿಷ್ಠ ಸ್ಕೋರ್ ಹಾಕಿತ್ತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ಮೂರನೇ ದಿನದಾಟವನ್ನು 209/3 ರಿಂದ ಆರಂಭಿಸಿ 465 ರನ್ಗೆ ಆಲೌಟ್ ಆಯಿತು.
6 ರನ್ಗಳ ಮುನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಭಾರತ 2ನೇ ಇನ್ನಿಂಗ್ಸ್ನಲ್ಲಿ ನಿರೀಕ್ಷಿತ ಆರಂಭ ಪಡೆಯುವಲ್ಲಿ ವಿಫಲವಾಯಿತು. 2ನೇ ಇನ್ನಿಂಗ್ಸ್ನಲ್ಲಿ ಭಾರತ ತಂಡ 23.5 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 90 ರನ್ಗಳಿಸಿದೆ.
ಕನ್ನಡಿಗ ರಾಹುಲ್ ಅಜೇಯ 47 ರನ್, ನಾಯಕ ಗಿಲ್ ಅಜೇಯ 10 ರನ್ಗಳಿಸಿ 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ. ಮೊದಲ ಇನ್ನಿಂಗ್ಸ್ನ ಶತಕ ವೀರ ಯಶಸ್ವಿ ಜೈಸ್ವಾಲ್ ಕೇವಲ 4 ರನ್ಗಳಿಸಿ ಬ್ರೈಡನ್ ಕಾರ್ಸ್ಗೆ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ಜೇಮಿ ಸ್ಮಿತ್ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಬಂದ ಸಾಯಿ ಸುದರ್ಶನ್ 2ನೇ ವಿಕೆಟ್ ಜೊತೆಯಾಟದಲ್ಲಿ 66 ರನ್ ಸೇರಿಸಿದರು.
ಇಂಗ್ಲೆಂಡ್ ಪರ ಮೊದಲ ಇನ್ನಿಂಗ್ಸ್ನಲ್ಲಿ ಒಲಿ ಪೋಪ್ 106 ರನ್ ಗಳಿಸಿದರು. ಆದರೆ ಪೋಪ್ ಔಟ್ ಆದ ಬಳಿಕ ಇಂಗ್ಲೆಂಡ್ ಮಧ್ಯದ ಆವೃತ್ತಿಯಲ್ಲಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಹ್ಯಾರಿ ಬ್ರೂಕ್ 99 ರನ್ ಗೆ ಔಟ್ ಆಗಿ ಶತಕ ಮಿಸ್ ಮಾಡಿಕೊಂಡರು. ವೋಕ್ಸ್-ಕಾರ್ಸ್ ಜೋಡಿ 8ನೇ ವಿಕೆಟ್ಗೆ 55 ರನ್ ಸೇರಿಸಿ ಇಂಗ್ಲೆಂಡ್ಗೆ ಸ್ಪಷ್ಟ ಚೇತರಿಕೆ ನೀಡಿದರು.
ಭಾರತದ ಬೌಲರ್ ಜಸ್ಪ್ರೀತ್ ಬುಮ್ರಾ 5 ವಿಕೆಟ್ ಪಡೆಯುವ ಮೂಲಕ ಮಿಂಚಿದರು. ಪ್ರಸಿಧ್ ಕೃಷ್ಣ 3 ವಿಕೆಟ್, ಸಿರಾಜ್ 2 ವಿಕೆಟ್ ಪಡೆದರು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡದ ಪರ ರಿಷಭ್ ಪಂತ್ 134, ಶುಭ್ಮನ್ ಗಿಲ್ 147 ಹಾಗೂ ಜೈಸ್ವಾಲ್ 101 ರನ್ ಗಳಿಸಿದರು.