ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಜುಲೈ 23ರಿಂದ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫೋರ್ಡ್ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಈಗಾಗಲೇ ಮೂರು ಪಂದ್ಯಗಳ ಬಳಿಕ ಇಂಗ್ಲೆಂಡ್ ತಂಡ 2-1ರಿಂದ ಮುನ್ನಡೆ ಸಾಧಿಸಿರುವುದು ಭಾರತೀಯ ತಂಡಕ್ಕೆ ಈ ಪಂದ್ಯ ನಿರ್ಣಾಯಕವಾಗಿಸಿರುವುದು ಸ್ಪಷ್ಟ.
ಈ ನಡುವೆ ಟೀಮ್ ಇಂಡಿಯಾಗೆ ಮಹತ್ವದ ಬದಲಾವಣೆಯೊಂದಾಗಿದೆ. ಭಾರತದ ಎಡಗೈ ವೇಗಿ ಅರ್ಷದೀಪ್ ಸಿಂಗ್ ಅಭ್ಯಾಸದ ವೇಳೆ ಗಾಯಗೊಂಡಿದ್ದು, ಮುಂದಿನ ಎರಡು ಪಂದ್ಯಗಳಿಗೆ ಲಭ್ಯವಿರುವುದಿಲ್ಲ. ಅವರ ಬದಲಿಗೆ ಹರ್ಯಾಣದ 24 ವರ್ಷದ ಯುವ ಬಲಗೈ ವೇಗಿ ಅನ್ಶುಲ್ ಕಂಬೋಜ್ ಅವರನ್ನು ಟೆಸ್ಟ್ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಇತ್ತೀಚೆಗೆ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತ ಎ ಪರ ತೀವ್ರ ದಾಳಿಯಿಂದ ಗಮನ ಸೆಳೆದ ಅವರು ಈಗ ರಾಷ್ಟ್ರೀಯ ತಂಡದ ಬಾಗಿಲು ತಟ್ಟಿದ್ದಾರೆ.
ಅನ್ಶುಲ್ ಕಂಬೋಜ್ ಅವರ ಪ್ರಥಮ ದರ್ಜೆ ಕ್ರಿಕೆಟ್ ಸಾಧನೆಗಳು ಗಮನಾರ್ಹವಾಗಿವೆ. 24 ಪಂದ್ಯಗಳಲ್ಲಿ ಅವರು 79 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರಲ್ಲಿ ಎರಡು ಬಾರಿ ಐದು ವಿಕೆಟ್‌ಗಳ ಸಾಧನೆಯಿದೆ. ಬ್ಯಾಟಿಂಗ್‌ನಲ್ಲೂ ತಮ್ಮ ಕೌಶಲ್ಯ ತೋರಿಸಿರುವ ಅವರು 486 ರನ್‌ಗಳನ್ನು ತಮ್ಮದಾಗಿಸಿಕೊಂಡಿದ್ದು, ಒಂದೆರಡು ಅರ್ಧಶತಕಗಳನ್ನೂ ಬಾರಿಸಿದ್ದಾರೆ.
ಈ ಪಂದ್ಯಕ್ಕೂ ಮುನ್ನ ಕಂಬೋಜ್ ಟೀಮ್ ಇಂಡಿಯಾದೊಂದಿಗೆ ಅಭ್ಯಾಸಕ್ಕೆ ಸೇರಿಕೊಳ್ಳಲಿದ್ದು, ತಮ್ಮ ಕೊಡುಗೆ ನೀಡುವ ಸಾಧ್ಯತೆಯಿದೆ. ಭಾರತ ಸರಣಿಯಲ್ಲಿ ಸಮಬಲ ಸಾಧಿಸಲು ಈ ಪಂದ್ಯವನ್ನು ಗೆಲ್ಲಲೇಬೇಕಾದ ಪರಿಸ್ಥಿತಿಯಲ್ಲಿದೆ.
ಭಾರತದ ಟೆಸ್ಟ್ ತಂಡದಲ್ಲಿ ನಾಯಕತ್ವವನ್ನು ಶುಭ್‌ಮನ್ ಗಿಲ್ ವಹಿಸಿಕೊಂಡಿದ್ದು, ರಿಷಭ್ ಪಂತ್ ಉಪನಾಯಕನಾಗಿದ್ದಾರೆ. ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಕರುಣ್ ನಾಯರ್ ಸೇರಿದಂತೆ ಯುವ ಪ್ರತಿಭೆಗಳು ಈ ಸರಣಿಯ ಉಳಿದ ಪಂದ್ಯಗಳತ್ತ ಕಣ್ಣುಹಾಯಿಸಿದೆ.