ಹೊಸದಿಗಂತ ಡಿಜಿಟಲ್ ಡೆಸ್ಕ್:
2025ರ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL) ಟೂರ್ನಿಯಲ್ಲಿನ ಬಹು ನಿರೀಕ್ಷಿತ ಭಾರತ ಚಾಂಪಿಯನ್ಸ್ ಮತ್ತು ಪಾಕಿಸ್ತಾನ ಚಾಂಪಿಯನ್ಸ್ ನಡುವಿನ ಪಂದ್ಯವನ್ನು ಜುಲೈ 20ರಂದು ಎಡ್ಜ್‌ಬಾಸ್ಟನ್‌ನಲ್ಲಿ ನಡೆಸಬೇಕಾಗಿತ್ತು. ಆದರೆ, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಮೃತರಾದ ಹಿನ್ನೆಲೆ, ಬಿಸಿಸಿಐ ಭಾರತ ತನ್ನ ಲೆಜೆಂಡ್ಸ್ ಆಟಗಾರರನ್ನು ಪಾಕಿಸ್ತಾನದ ವಿರುದ್ಧ ಆಡಲು ಅನುಮತಿ ನೀಡುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದೆ.
ಈ ನಿರ್ಧಾರಕ್ಕೂ ಮುನ್ನ ಭಾರತೀಯ ಆಟಗಾರರು ಲೆಜೆಂಡ್ಸ್ ಲೀಗ್ನಲ್ಲಿ ಪಾಕಿಸ್ತಾನದ ವಿರುದ್ಧ ಆಡಲು ಒಪ್ಪಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ಕೆಲವು ಆಟಗಾರರು ತಾವೂ ಪಾಕಿಸ್ತಾನದ ವಿರುದ್ಧ ಆಡುವುದಿಲ್ಲ ಎಂದು ಹಿಂದೆ ಸರಿದಿದ್ದರು.
ಭಾರತದ ದಿಗ್ಗಜ ಆಟಗಾರರಾದ ಶಿಖರ್ ಧವನ್, ಹರ್ಭಜನ್ ಸಿಂಗ್, ಸುರೇಶ್ ರೈನಾ, ಯೂಸುಫ್ ಪಠಾಣ್ ಮತ್ತು ಇರ್ಫಾನ್ ಪಠಾಣ್ ಅವರು ಪಾಕಿಸ್ತಾನದ ವಿರುದ್ಧ ಆಡಲು ನಿರಾಕರಿಸಿದರು. ಶಿಖರ್ ಧವನ್ ಮೇ 11ರಂದೇ WCL ಆಯೋಜಕರಿಗೆ ತಾವು ಪಾಕಿಸ್ತಾನ ವಿರುದ್ಧ ಆಟವಾಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದರು.
WCL ನ ಪ್ರಮುಖ ಪ್ರಾಯೋಜಕರಾದ EaseMyTrip ಸಂಸ್ಥೆ ಕೂಡ ಪಾಕಿಸ್ತಾನ ತಂಡದ ಒಳಗೊಂಡ ಪಂದ್ಯಗಳಿಗೆ ಬೆಂಬಲ ನೀಡದಿರಲು ತೀರ್ಮಾನಿಸಿದೆ. ಸಂಸ್ಥೆಯವರು, “ನಾವು ಭಾರತ ಚಾಂಪಿಯನ್ಸ್ ತಂಡಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಪಾಕಿಸ್ತಾನ ತಂಡ ಇರುವ ಪಂದ್ಯಗಳಿಗೆ ಯಾವುದೇ ಬೆಂಬಲವಿಲ್ಲ. ಭಾರತ ನಮ್ಮ ಆದ್ಯತೆ” ಎಂದು ಸ್ಪಷ್ಟಪಡಿಸಿದರು.
WCL ಆಯೋಜಕರ ಕ್ಷಮೆಯಾಚನೆ
ಪಂದ್ಯದ ಕುರಿತು ಆಯೋಜಕರು ತಮ್ಮ ಅಧಿಕೃತ X (ಹಿಂದಿನ ಟ್ವಿಟ್ಟರ್) ಖಾತೆಯಲ್ಲಿ ಪ್ರಕಟಣೆ ನೀಡುತ್ತಾ, “ಇತರ ಕ್ರೀಡೆಗಳಂತೆ ಕ್ರಿಕೆಟ್‌ನಲ್ಲೂ ಭಾರತ-ಪಾಕಿಸ್ತಾನ ಆಟಗಳಿಂದ ಸಂತೋಷದ ಕ್ಷಣಗಳನ್ನು ನೀಡಬೇಕೆಂಬ ಉದ್ದೇಶ ನಮ್ಮದು. ಆದರೆ, ಈ ಮೂಲಕ ಯಾರ ಭಾವನೆಗಳಿಗೆ ಧಕ್ಕೆ ಉಂಟಾದರೆ, ಅದಕ್ಕಾಗಿ ನಾವು ಕ್ಷಮೆ ಕೇಳುತ್ತೇವೆ,” ಎಂದು ತಿಳಿಸಿದ್ದಾರೆ.
ಭದ್ರತಾ ಕಾರಣಗಳು, ರಾಷ್ಟ್ರೀಯ ಭಾವನೆಗಳು ಹಾಗೂ ಆಟಗಾರರ ವ್ಯಕ್ತಿಗತ ನಿರ್ಧಾರಗಳಿಂದಾಗಿ ಈ ಪಂದ್ಯ ಲೆಜೆಂಡ್ ಆಗುವ ಮುನ್ನವೇ ನೆನಪಾಗಿ ಉಳಿಯುವಂತಾಗಿದೆ.