ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL) ಟೂರ್ನಿಯಲ್ಲಿ ಭಾನುವಾರ (ಜುಲೈ 20) ನಡೆಯಬೇಕಾಗಿದ್ದ ಇಂಡಿಯಾ ಚಾಂಪಿಯನ್ಸ್ ಹಾಗೂ ಪಾಕಿಸ್ತಾನ್ ಚಾಂಪಿಯನ್ಸ್ ನಡುವಣ ಹೈವೋಲ್ಟೇಜ್ ಪಂದ್ಯವನ್ನು ಆಯೋಜಕರು ರದ್ದುಪಡಿಸಿದ್ದಾರೆ. ಇದಕ್ಕೆ ಕಾರಣವೆಂದರೆ, ಭಾರತದ ಪ್ರಮುಖ ಆಟಗಾರರು ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿಯುವುದನ್ನು ನಿರಾಕರಿಸಿದ್ದಾರೆ.
ಈ ನಿರ್ಧಾರಕ್ಕೆ ಪಾಕಿಸ್ತಾನ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಕಿಡಿಕಾರಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ಅವರು, “ನಾವು ಕ್ರಿಕೆಟ್ ಆಡಲು ಇಲ್ಲಿದ್ದೇವೆ, ರಾಜಕೀಯ ಮಾಡುವುದಕ್ಕೆ ಅಲ್ಲ. ಭಾರತೀಯ ಆಟಗಾರರು ಆಟವಾಡಲು ಇಚ್ಛೆ ಇಲ್ಲದಿದ್ದರೆ ಮೊದಲು ಹೇಳಬೇಕಿತ್ತು. ಅಭ್ಯಾಸ ಮಾಡಿ, ಎಲ್ಲ ತಯಾರಿಗಳ ಬಳಿಕ ದಿಢೀರ್ ಹಿಂದೆ ಸರಿಯುವುದು ಸರಿಯಾದ ಕೆಲಸವಲ್ಲ” ಎಂದಿದ್ದಾರೆ.
ಪಾಕಿಸ್ತಾನ್ ತಂಡದ ಮಾಲೀಕ ಕಾಮಿಲ್ ಖಾನ್ ಸ್ಪಷ್ಟಪಡಿಸಿದಂತೆ, ಟೂರ್ನಿಯ ಉಳಿದ ಎಲ್ಲಾ ಪಂದ್ಯಗಳು ನಿಗದಿಯಂತೆ ನಡೆಯಲಿದ್ದು, ನಾಕೌಟ್ ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾದರೆ ಆಯೋಜಕರು ಹೊಸ ಯೋಜನೆ ರೂಪಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಭಾರತದಲ್ಲಿ ಪಾಕಿಸ್ತಾನ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಆಟಗಾರರ ದೇಶಪ್ರೇಮವನ್ನು ಪ್ರಶ್ನಿಸುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಅಭಿಪ್ರಾಯಗಳು ಹರಿದಾಡುತ್ತಿದ್ದವು. ಈ ಕಾರಣದಿಂದಾಗಿ ಇಂಡಿಯಾ ಚಾಂಪಿಯನ್ಸ್ ತಂಡದ ಆಟಗಾರರು ಪಂದ್ಯವಾಡದ ನಿರ್ಧಾರ ಕೈಗೊಂಡಿದ್ದಾರೆ.