ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಟೆಸ್ಟ್ ಸರಣಿ ಮುಕ್ತಾಯಗೊಂಡ ತಕ್ಷಣವೇ ಆರಂಭವಾಗುವ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿ ಹೊಸ ನಾಯಕತ್ವ ಚರ್ಚೆಗೆ ಕಾರಣವಾಗಿದೆ. ನವೆಂಬರ್ 30ರಿಂದ ಆರಂಭವಾಗುವ ಈ ಸಿರೀಸ್‌ಗೆ ಟೀಮ್ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ಲಭ್ಯವಿಲ್ಲ ಎನ್ನುವುದು ಸ್ಪಷ್ಟವಾಗಿದ್ದು, ಕುತ್ತಿಗೆ ನೋವಿನ ಸಮಸ್ಯೆಯಿಂದ ವೈದ್ಯರು ಅವರಿಗೆ ವಿಶ್ರಾಂತಿ ಸೂಚಿಸಿದ್ದಾರೆ.
ಗಿಲ್ ಹೊರಬಿದ್ದ ಹಿನ್ನೆಲೆಯಲ್ಲಿ, ಭಾರತ ತಂಡವನ್ನು ಯಾರು ಮುನ್ನಡೆಸುತ್ತಾರೆ ಎಂಬ ಪ್ರಶ್ನೆ ಮೂಡಿದೆ.
ಈ ನಡುವಲ್ಲೇ ಕನ್ನಡಿಗ ಕೆಎಲ್ ರಾಹುಲ್ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಗಿಲ್ ಅನುಪಸ್ಥಿತಿಯಲ್ಲಿ ರಾಹುಲ್‌ರನ್ನು ನಾಯಕನನ್ನಾಗಿ ನೇಮಿಸುವ ಸಾಧ್ಯತೆ ಜಾಸ್ತಿಯಾಗಿದ್ದು, ಇದಕ್ಕೆ ಕಾರಣ ಅವರ ಹಿಂದಿನ ನಾಯಕತ್ವದ ಅನುಭವ. ರಾಹುಲ್ ಈಗಾಗಲೇ 12 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದು, ಅವುಗಳಲ್ಲಿ ಎಂಟು ಪಂದ್ಯಗಳಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.
ಉಪನಾಯಕನ ಸ್ಥಾನಕ್ಕೆ ರಿಷಭ್ ಪಂತ್ ಹೆಸರು ಮುನ್ನಡೆಯಲ್ಲಿದೆ. ಶ್ರೇಯಸ್ ಅಯ್ಯರ್ ಆಸ್ಟ್ರೇಲಿಯಾ ಸರಣಿಯಲ್ಲಿ ಗಾಯಗೊಂಡಿದ್ದು, ಈ ಸರಣಿಗೂ ಅವರು ಅಲಭ್ಯರಾಗುವ ಅಂದಾಜು ಇರುವುದರಿಂದ ಪಂತ್ ಅವರಿಗೆ ವೈಸ್-ಕ್ಯಾಪ್ಟನ್ ಜವಾಬ್ದಾರಿ ಸಿಗುವ ಸಾಧ್ಯತೆ ಹೆಚ್ಚಾಗಿದೆ.

