Wednesday, December 3, 2025

India vs South Africa: ಡಿ.9 ರಿಂದ T20 ಶುರು! ಪಾಂಡ್ಯ ಕಂಬ್ಯಾಕ್, ಜೈಸ್ವಾಲ್​ಗೆ ಚಾನ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಕದಿನ ಸರಣಿಯ ಮುಕ್ತಾಯದ ಬೆನ್ನಲ್ಲೇ ಕ್ರಿಕೆಟ್ ಪ್ರೇಮಿಗಳಿಗೆ ಮತ್ತೊಂದು ರೋಚಕ ಸುದ್ದಿಯೊಂದು ಸಿಗಲಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ20 ಸರಣಿ ಡಿಸೆಂಬರ್ 9ರಿಂದ ಆರಂಭವಾಗಲಿದೆ. ಈ ಸರಣಿಯ ಮೊದಲ ಪಂದ್ಯ ಒಡಿಶಾದ ಕಟಕ್‌ನಲ್ಲಿ ನಡೆಯಲಿದ್ದು, ಎರಡನೇ ಪಂದ್ಯ ಮುಲ್ಲನ್‌ಪುರದಲ್ಲಿ ಜರುಗಲಿದೆ. ಉಳಿದ ಪಂದ್ಯಗಳು ಕ್ರಮವಾಗಿ ಧರ್ಮಶಾಲಾ, ಲಕ್ನೋ ಮತ್ತು ಅಹಮದಾಬಾದ್ ಮೈದಾನಗಳಲ್ಲಿ ನಡೆಯಲಿವೆ.

ಈ ಸರಣಿಯ ಪ್ರಮುಖ ಆಕರ್ಷಣೆಯಾಗಿ ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮರಳುತ್ತಿರುವುದು ಅಭಿಮಾನಿಗಳಲ್ಲಿ ಉತ್ಸಾಹ ಮೂಡಿಸಿದೆ. ಏಷ್ಯಾಕಪ್ ಸಂದರ್ಭದಲ್ಲಿ ಗಾಯಗೊಂಡಿದ್ದ ಪಾಂಡ್ಯ ಹಲವು ತಿಂಗಳು ಮೈದಾನದಿಂದ ದೂರ ಉಳಿದಿದ್ದರು. ಇತ್ತೀಚೆಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬರೋಡಾ ಪರ ಆಡಿದ ಅವರು ಸಂಪೂರ್ಣ ಫಿಟ್‌ನೆಸ್ ಸಾಧಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸೌತ್ ಆಫ್ರಿಕಾ ವಿರುದ್ಧದ ಟಿ20 ತಂಡಕ್ಕೆ ಪಾಂಡ್ಯ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಇತ್ತ ಟೀಂ ಇಂಡಿಯಾದ ಉಪನಾಯಕ ಶುಭ್‌ಮನ್ ಗಿಲ್ ಇನ್ನೂ ಕುತ್ತಿಗೆ ನೋವಿನಿಂದ ಸಂಪೂರ್ಣ ಚೇತರಿಸಿಕೊಂಡಿಲ್ಲ. ಹೀಗಾಗಿ ಅವರು ಈ ಟಿ20 ಸರಣಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಯುವ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್ ಅವರಿಗೆ ಮತ್ತೊಂದು ದೊಡ್ಡ ಅವಕಾಶ ಸಿಗುವ ನಿರೀಕ್ಷೆ ಮೂಡಿದೆ. ಈಗಾಗಲೇ ಏಕದಿನ ಸರಣಿಯಲ್ಲಿ ಗಿಲ್ ಬದಲಿಗೆ ಆರಂಭಿಕನಾಗಿ ಕಣಕ್ಕಿಳಿದಿರುವ ಜೈಸ್ವಾಲ್, ಟಿ20 ಸರಣಿಗೂ ಆಯ್ಕೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಮೂಲಕ ಭಾರತ–ದಕ್ಷಿಣ ಆಫ್ರಿಕಾ ನಡುವಣ ಟಿ20 ಸಮರಕ್ಕೆ ಹೆಚ್ಚಿನ ಕುತೂಹಲ ಸೇರಿದೆ.

error: Content is protected !!