ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಆರಂಭವಾದ ಭಾರತ–ಸೌತ್ ಆಫ್ರಿಕಾ ಮೊದಲ ಟೆಸ್ಟ್ ಆರಂಭದಲ್ಲೇ ಬೌಲರ್‌ಗಳ ಯುದ್ಧಭೂಮಿಯಾಗಿದೆ. ಪಂದ್ಯ ಮೊದಲ ದಿನವೇ ಎರಡೂ ತಂಡಗಳು ಕಡಿಮೆ ಮೊತ್ತಕ್ಕೆ ಆಲೌಟ್ ಆಗಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ಸೌತ್ ಆಫ್ರಿಕಾ, ಜಸ್‌ಪ್ರೀತ್ ಬುಮ್ರಾ ಅವರ ವೇಗದ ಮಿಂಚಿಗೆ ತತ್ತರಿಸಿ ಕೇವಲ 159 ರನ್‌ಗಳಿಗೆ ಸಿಮಿತವಾಯಿತು. ಬುಮ್ರಾ ಕೇವಲ 27 ರನ್ ಬಿಟ್ಟುಕೊಟ್ಟು ಐದು ವಿಕೆಟ್ ಕಬಳಿಸಿ ಅದ್ಭುತ ಪ್ರದರ್ಶನ ನೀಡಿದರು.
ಬುಮ್ರಾ ನೀಡಿದ ವೇದಿಕೆಯಿಂದ ಮೊದಲ ಇನಿಂಗ್ಸ್‌ಗೆ ಬಂದ ಭಾರತವೂ ನಿರೀಕ್ಷಿತ ಸ್ಥಿರತೆ ತೋರಲಿಲ್ಲ. ಆರಂಭಿಕ ಯಶಸ್ವಿ ಜೈಸ್ವಾಲ್ 12 ರನ್‌ಗೇ ಮಣಿದರೆ, ಕೆಎಲ್ ರಾಹುಲ್ 39 ರನ್ ನೀಡಿ ನಿಂತರು. ವಾಷಿಂಗ್ಟನ್ ಸುಂದರ್ (29), ರಿಷಭ್ ಪಂತ್ (27) ಮತ್ತು ಜಡೇಜಾ (27) ಮಾತ್ರ ಸ್ವಲ್ಪ ಹೋರಾಟ ತೋರಿದರೂ, ಮಧ್ಯಮ ಕ್ರಮಾಂಕ ಸಂಪೂರ್ಣ ಕುಸಿತ ಕಂಡಿತು. ಶುಭ್‌ಮನ್ ಗಿಲ್ ಕೇವಲ 4 ರನ್ ನಂತರ ಗಾಯಗೊಂಡು ಹೊರಬಂದರು.
ತಳ ಕ್ರಮಾಂಕವೂ ಹೋರಾಟವಿಲ್ಲದೆ ಕುಸಿದು, ಭಾರತ 62.2 ಓವರ್‌ಗಳಲ್ಲಿ 189 ರನ್‌ಗಳಿಗೆ ಆಲೌಟ್ ಆಯಿತು. ಸೌತ್ ಆಫ್ರಿಕಾ ಪರ ಸೈಮನ್ ಹಾರ್ಮರ್ 4 ವಿಕೆಟ್ ಪಡೆದು, ಮಾರ್ಕೊ ಯಾನ್ಸೆನ್ 3 ವಿಕೆಟ್ ಕಬಳಿಸಿ ಭಾರತವನ್ನು ಒತ್ತಡಕ್ಕೆ ತಳ್ಳಿದರು.
ಪಂದ್ಯದ ದಿಶೆಯನ್ನು ಈಗ ಎರಡನೇ ಇನಿಂಗ್ಸ್‌ನ ಆರಂಭ ನಿರ್ಧರಿಸಲಿದೆ. ಬ್ಯಾಟಿಂಗ್‌ಗೆ ಅಸಹಕಾರಿಯಾಗಿರುವ ಪಿಚ್ ಎರಡೂ ತಂಡಗಳಿಗೂ ಸವಾಲಿನ ಸೂಚನೆ ನೀಡಿದೆ.

