ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ–ಸೌತ್ ಆಫ್ರಿಕಾ ಟೆಸ್ಟ್ ಸರಣಿ ಮುಕ್ತಾಯವಾದ ಕೆಲವೇ ದಿನಗಳಲ್ಲಿ, ನವೆಂಬರ್ 30ರಿಂದ ಆರಂಭವಾಗಲಿರುವ ಏಕದಿನ ಸರಣಿಗೆ ಬಿಸಿಸಿಐ ತಂಡವನ್ನು ಪ್ರಕಟಿಸಿದೆ. ಕೆಎಲ್ ರಾಹುಲ್ ನಾಯಕತ್ವ ವಹಿಸಿರುವ ಈ ಹೊಸ ಒಡಿಐ ತಂಡದಲ್ಲಿ ಅನೇಕ ಬದಲಾವಣೆಗಳು ಕಾಣಿಸಿಕೊಂಡಿದ್ದು, ಆಸ್ಟ್ರೇಲಿಯಾ ವಿರುದ್ಧದ ಹಿಂದಿನ ಸರಣಿಯಲ್ಲಿ ಇದ್ದ 8 ಪ್ರಮುಖ ಆಟಗಾರರು ಈ ಬಾರಿ ಸ್ಥಾನ ಪಡೆದಿಲ್ಲ.
ಮೊದಲ ಟೆಸ್ಟ್‌ನಲ್ಲಿ ಕುತ್ತಿಗೆ ನೋವಿಗೆ ತುತ್ತಾದ ಶುಭ್ಮನ್ ಗಿಲ್‌ಗೆ ವೈದ್ಯರು ವಿಶ್ರಾಂತಿ ಸಲಹೆ ನೀಡಿರುವುದರಿಂದ ಅವರನ್ನು ತಂಡದಿಂದ ಹೊರಗಿಟ್ಟಿದ್ದಾರೆ. ಅದೇ ರೀತಿ ಉಪನಾಯಕ ಶ್ರೇಯಸ್ ಅಯ್ಯರ್ ಗಾಯದ ಕಾರಣದಿಂದ ಅಲಭ್ಯ. ಫಿಟ್‌ನೆಸ್ ಸಮಸ್ಯೆ ಎದುರಿಸುತ್ತಿರುವ ಹಾರ್ದಿಕ್ ಪಾಂಡ್ಯ ಕೂಡ ಈ ಸರಣಿಗೆ ತೆರಳಲಿಲ್ಲ; ಅವರು ಟಿ20 ಮೂಲಕ ಮರಳುವ ನಿರೀಕ್ಷೆ ಇದೆ.
ಟೆಸ್ಟ್ ತಂಡದ ವೇಗಿ ಮೊಹಮ್ಮದ್ ಸಿರಾಜ್ ಮತ್ತು ಸ್ಪಿನ್ ಆಲ್‌ರೌಂಡರ್ ಅಕ್ಷರ್ ಪಟೇಲ್ ಈ ಬಾರಿ ಪರಿಗಣನೆಯಿಂದ ಹೊರಗೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಮಿಂಚಿದ್ದ ವರುಣ್ ಚಕ್ರವರ್ತಿಗೂ ಒಡಿಐ ಅವಕಾಶ ಸಿಗದೇ ಇದ್ದರೂ ಟಿ20ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟಿ20 ವಿಶ್ವಕಪ್‌ಗೆ ಸಿದ್ಧತೆಗಾಗಿ ಜಸ್‌ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಹಿರಿಯ ವೇಗಿ ಮೊಹಮ್ಮದ್ ಶಮಿ ಕೂಡ ಈ ಸರಣಿಯಲ್ಲಿ ಇರಲ್ಲ.
ಭಾರತದ ಒಡಿಐ ತಂಡದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ರಾಹುಲ್ ನಾಯಕತ್ವದಲ್ಲಿ, ಪಂತ್ ವಿಕೆಟ್ ಕೀಪರ್ ಆಗಿ ಮತ್ತು ಜಡೇಜಾ–ಕುಲ್ದೀಪ್ ಸಂಯೋಜನೆಯೊಂದಿಗೆ ಬಲಿಷ್ಠ ತಂಡ ಮೈದಾನಕ್ಕಿಳಿಯಲಿದೆ.

