Thursday, November 13, 2025

India vs South Africa Test | ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಔಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯು ನವೆಂಬರ್ 14ರಿಂದ ಆರಂಭವಾಗಲಿದೆ. ಈ ಸರಣಿಯ ಮೊದಲ ಪಂದ್ಯ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಟೀಂ ಇಂಡಿಯಾ ಸಜ್ಜಾಗುತ್ತಿದೆ. ಆದರೆ ಮೊದಲ ಟೆಸ್ಟ್ ಆರಂಭಕ್ಕೂ ಮುನ್ನ ತಂಡಕ್ಕೆ ಸಣ್ಣ ಆಘಾತವೊಂದು ತಟ್ಟಿದೆ. ಯುವ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿಯನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ ಎಂದು ಸಹಾಯಕ ಕೋಚ್ ಟೆನ್ ಡೋಸ್ಚೇಟ್ ಪತ್ರಿಕಾಗೋಷ್ಠಿಯಲ್ಲಿ ದೃಢಪಡಿಸಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ನಿತೀಶ್ ಕುಮಾರ್ ರೆಡ್ಡಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾಗವಹಿಸುವುದಿಲ್ಲ. ಅವರ ಬದಲಿಗೆ ಮ್ಯಾನೇಜ್‌ಮೆಂಟ್ ಅವರಿಗೆ ಹೆಚ್ಚಿನ ಆಟದ ಸಮಯ ದೊರೆಯುವಂತೆ ಭಾರತ ಎ ತಂಡಕ್ಕೆ ಕಳುಹಿಸುವ ನಿರ್ಧಾರ ತೆಗೆದುಕೊಂಡಿದೆ. ನಿತೀಶ್ ಇತ್ತೀಚೆಗಷ್ಟೇ ಗಾಯದಿಂದ ಚೇತರಿಸಿಕೊಂಡಿದ್ದು, ಪಂದ್ಯ ಫಿಟ್‌ನೆಸ್‌ಗಾಗಿ ಅವರು ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ಭಾರತ ಎ ಮತ್ತು ದಕ್ಷಿಣ ಆಫ್ರಿಕಾ ಎ ನಡುವಿನ ಸರಣಿಯಲ್ಲಿ ಭಾಗವಹಿಸಲಿದ್ದಾರೆ.

ನಿತೀಶ್ ಕುಮಾರ್ ರೆಡ್ಡಿ ಇತ್ತೀಚೆಗೆ ಆಸ್ಟ್ರೇಲಿಯಾ ಪ್ರವಾಸದ ಭಾಗವಾಗಿದ್ದರು. ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಗಾಯಗೊಂಡ ಬಳಿಕ ಟಿ20 ಸರಣಿಯಿಂದ ಹೊರಗುಳಿದಿದ್ದರು. ಇದೀಗ ಸಂಪೂರ್ಣವಾಗಿ ಫಿಟ್ ಆಗಿರುವ ಅವರು ಅಭ್ಯಾಸದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ, ಮೊದಲ ಟೆಸ್ಟ್‌ನ ಆಡುವ ಹನ್ನೊಂದರಲ್ಲಿ ಅವರಿಗೆ ಅವಕಾಶ ದೊರಕಲಿಲ್ಲ. ಇದರ ಪರಿಣಾಮವಾಗಿ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಇತ್ತೀಚೆಗಷ್ಟೇ ಎರಡು ಅನಧಿಕೃತ ಟೆಸ್ಟ್ ಪಂದ್ಯಗಳನ್ನು ಆಡಿವೆ. ಇದೀಗ ರಾಜ್‌ಕೋಟ್‌ನಲ್ಲಿ ಮೂರು ಅನಧಿಕೃತ ಏಕದಿನ ಪಂದ್ಯಗಳ ಸರಣಿ ನವೆಂಬರ್ 13ರಿಂದ ಆರಂಭವಾಗಲಿದೆ. ಈ ಸರಣಿಗೆ ತಿಲಕ್ ವರ್ಮಾ ನಾಯಕತ್ವ ವಹಿಸಲಿದ್ದು, ರುತುರಾಜ್ ಗಾಯಕ್ವಾಡ್ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ.

error: Content is protected !!