ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಅಮೆರಿಕದ ತೈಲ ಸಮೃದ್ಧ ರಾಷ್ಟ್ರ ವೆನೆಜುವೆಲಾದಲ್ಲಿ ರಾಜಕೀಯ ಅಸ್ಥಿರತೆ ಗಂಭೀರವಾಗಿರುವ ಹಿನ್ನೆಲೆ, ಭಾರತ ಸರ್ಕಾರ ತನ್ನ ಪ್ರಜೆಗಳಿಗೆ ಎಚ್ಚರಿಕೆ ನೀಡಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೋ ಅವರನ್ನು ಸೆರೆಹಿಡಿದಿರುವುದಾಗಿ ಘೋಷಿಸಿದ ಬಳಿಕ ಉಂಟಾದ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು, ವೆನೆಜುವೆಲಾಕ್ಕೆ ಅನಗತ್ಯ ಪ್ರಯಾಣ ಮಾಡದಂತೆ ವಿದೇಶಾಂಗ ಸಚಿವಾಲಯ ಶನಿವಾರ ರಾತ್ರಿ ಸೂಚಿಸಿದೆ.
ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್ ಮೇಲೆ ಅಮೆರಿಕ ದಾಳಿ ನಡೆಸಿ ಅಧ್ಯಕ್ಷ ಮಡುರೋ ಹಾಗೂ ಅವರ ಪತ್ನಿಯನ್ನು ಬಂಧಿಸಲಾಗಿದೆ ಎಂಬ ಹೇಳಿಕೆಯಿಂದ ದೇಶದಲ್ಲಿ ರಾಜಕೀಯ ಅನಿಶ್ಚಿತತೆ ಹೆಚ್ಚಾಗಿದೆ. ಅಮೆರಿಕದ ಈ ಕ್ರಮವನ್ನು ರಷ್ಯಾ, ಚೀನಾ ಸೇರಿದಂತೆ ಹಲವು ಪ್ರಮುಖ ರಾಷ್ಟ್ರಗಳು ತೀವ್ರವಾಗಿ ಟೀಕಿಸಿವೆ. ಈ ಬೆಳವಣಿಗೆಗಳು ಪ್ರದೇಶದಲ್ಲಿ ಭದ್ರತಾ ಪರಿಸ್ಥಿತಿಯನ್ನು ಸಂಕೀರ್ಣಗೊಳಿಸಿರುವುದಾಗಿ ಭಾರತ ಸರ್ಕಾರ ಅಂದಾಜಿಸಿದೆ.
ಇದನ್ನೂ ಓದಿ: FOOD | ಮಧ್ಯಾಹ್ನ ಊಟಕ್ಕೆ ಹೊಸ ರುಚಿ: ಸೋಯಾ ಕೀಮಾ ಫ್ರೈ! ಒಮ್ಮೆ ತಿಂದು ನೋಡಿ
ಈ ಹಿನ್ನೆಲೆಯಲ್ಲಿ ವೆನೆಜುವೆಲಾದಲ್ಲಿರುವ ಎಲ್ಲಾ ಭಾರತೀಯರು ಅತ್ಯಂತ ಜಾಗರೂಕರಾಗಿರಬೇಕು ಎಂದು ಸಲಹೆ ನೀಡಲಾಗಿದೆ. ಅನಗತ್ಯವಾಗಿ ಹೊರಗೆ ಓಡಾಡದಂತೆ, ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಹಾಗೂ ಕ್ಯಾರಕಾಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆ ಸೂಚಿಸಲಾಗಿದೆ.
ಅವಶ್ಯಕತೆಯಾದರೆ ಭಾರತೀಯರು ರಾಯಭಾರ ಕಚೇರಿಯನ್ನು ದೂರವಾಣಿ ಸಂಖ್ಯೆ +58-412-9584288 ಮೂಲಕ (ವಾಟ್ಸಾಪ್ ಕರೆಗಳಿಗೂ ಲಭ್ಯ) ಅಥವಾ ಇಮೇಲ್ ಮೂಲಕ ಸಂಪರ್ಕಿಸಬಹುದು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

