ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲಾಗಿದೆ. ಇದರಲ್ಲಿ, ರಕ್ಷಣಾ ಕ್ಷೇತ್ರಕ್ಕಾಗಿ ಗಿ 6.2 ಲಕ್ಷ ಕೋಟಿ ರೂ.ಗಳನ್ನು ಘೋಷಿಸಲಾಗಿದೆ. ಇದು ಕಳೆದ ವರ್ಷಕ್ಕಿಂತ ಸರಿಸುಮಾರು 3.4 ಶೇಕಡಾ ಹೆಚ್ಚಾಗಿದೆ. ಕಳೆದ ವರ್ಷ ರಕ್ಷಣಾ ಕ್ಷೇತ್ರಕ್ಕೆ ಸರ್ಕಾರ 5.93 ಲಕ್ಷ ಕೋಟಿ ರೂ. ಘೋಷಿಸಿತ್ತು. ಒಟ್ಟು ಬಜೆಟ್ ಅನ್ನು ನೋಡಿದರೆ, ರಕ್ಷಣಾ ಕ್ಷೇತ್ರಕ್ಕೆ ಸರ್ಕಾರವು ಗರಿಷ್ಠ ಪಾಲನ್ನು, ಅಂದರೆ ಶೇ 8ರಷ್ಟನ್ನು ಇಟ್ಟುಕೊಂಡಿರುವುದು ಕಾಣಿಸುತ್ತಿದೆ.
ರಕ್ಷಣಾ ಬಜೆಟ್ ಅನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ, ಅದರಲ್ಲಿ ಮೊದಲ ಭಾಗವು ಆದಾಯ, ಎರಡನೆಯದು ಬಂಡವಾಳ ವೆಚ್ಚ ಮತ್ತು ಮೂರನೆಯದು ಪಿಂಚಣಿ. ರಕ್ಷಣಾ ವಲಯದಲ್ಲಿ ಸಂಬಳವನ್ನು ಆದಾಯ ಬಜೆಟ್‌ನಿಂದ ವಿತರಿಸಲಾಗುತ್ತದೆ. ಇದಕ್ಕಾಗಿ 2 ಲಕ್ಷದ 82 ಸಾವಿರದ 772 ಕೋಟಿ ರೂಪಾಯಿ ಇಡಲಾಗಿದೆ. ಇದಲ್ಲದೇ ಬಂಡವಾಳ ವೆಚ್ಚದಿಂದಲೇ ಶಸ್ತ್ರಾಸ್ತ್ರ ಮತ್ತಿತರ ಅಗತ್ಯ ಪರಿಕರಗಳನ್ನು ಖರೀದಿಸಲಾಗಿದ್ದು, ಇದಕ್ಕಾಗಿ ಬಜೆಟ್ ನಲ್ಲಿ 1 ಲಕ್ಷ 72 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಮೂರನೇ ಮತ್ತು ಪ್ರಮುಖ ಭಾಗವೆಂದರೆ ಪಿಂಚಣಿ. ಇದಕ್ಕಾಗಿ ಬಜೆಟ್‌ನಲ್ಲಿ 1 ಲಕ್ಷದ 41 ಸಾವಿರದ 205 ಕೋಟಿ ರೂ. ಘೋಷಿಸಲಾಗಿದೆ.
ಯಾವುದೇ ದೇಶದ ಸೇನೆಯ ದೊಡ್ಡ ಶಕ್ತಿ ಎಂದರೆ ಅದರ ಶಸ್ತ್ರಾಸ್ತ್ರಗಳು, ಯುದ್ಧ ವಿಮಾನಗಳು ಮತ್ತು ಮದ್ದುಗುಂಡುಗಳು. ರಕ್ಷಣಾ ಬಜೆಟ್‌ನಲ್ಲಿ ಶಸ್ತ್ರಾಸ್ತ್ರ ಮತ್ತು ಸಲಕರಣೆಗಳ ಖರೀದಿಗೆ 1 ಲಕ್ಷದ 72 ಸಾವಿರ ಕೋಟಿ ರೂ. ಘೋಷಿಸಲಾಗಿದೆ. ಈ ಹಣದಲ್ಲಿ ವಿಮಾನ ಮತ್ತು ಏರೋ ಇಂಜಿನ್ ಉಪಕರಣಗಳನ್ನು ಖರೀದಿಸಲಾಗುವುದು. ಇದಲ್ಲದೇ ಭಾರೀ ಮತ್ತು ಮಧ್ಯಮ ವಾಹನಗಳು, ಇತರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಖರೀದಿಸಲಾಗುವುದು. ಇದಲ್ಲದೇ ಸೇನೆಗೆ ಇತರೆ ತಾಂತ್ರಿಕ ಉಪಕರಣಗಳನ್ನು ಅಳವಡಿಸುವ ಯೋಜನೆಯೂ ಇದೆ ಎಂದು ಸಚಿವರು ತಿಳಿಸಿದ್ದಾರೆ.