ಹೊಸದಿಗಂತ ಡಿಜಿಟಲ್ ಡೆಸ್ಕ್:
ನನ್ನ ಮೂರನೇ ಅವಧಿಯಲ್ಲಿ ಭಾರತವು ವಿಶ್ವದ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಭರವಸೆ ನೀಡಿದ್ದಾರೆ.
ಉತ್ತರಾಖಂಡದ ಜಾಗತಿಕ ಹೂಡಿಕೆದಾರರ ಶೃಂಗಸಭೆ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿದೆ. ಬಿಜೆಪಿ ಅಧಿಕಾರ ಉಳಿಸಿಕೊಂಡರೆ 3ನೇ ಅವಧಿಗೆ ಕೇಂದ್ರದಲ್ಲಿ ಸರ್ಕಾರ ರಚಿಸಲಿದ್ದೇವೆ. ಈ ಅವಧಿಯಲ್ಲಿ ದೇಶ ವಿಶ್ವದ ಅಗ್ರ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉತ್ತರಾಖಂಡದಲ್ಲಿ ವಿಶ್ವದ ಎಲ್ಲ ಹೂಡಿಕೆದಾರರಿಗೆ ಬಾಗಿಲು ತೆರೆಯುತ್ತಿದೆ. ಈ ನಿಟ್ಟಿನಲ್ಲಿ ಇಲ್ಲಿ ಹೆಚ್ಚೆಚ್ಚು ಹೂಡಿಕೆ ಮಾಡುವಂತೆ ಅವರು ಹೂಡಿಕೆದಾರರಿಗೆ ಇದೇ ವೇಳೆ ಕರೆ ನೀಡಿದರು.
ರಾಜ್ಯದಲ್ಲಿ ಹಲವು ಯೋಜನೆಗಳು ಪ್ರಗತಿಯಲ್ಲಿವೆ. ಪ್ರತಿ ಹಳ್ಳಿಗಳಲ್ಲೂ ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ಶೀಘ್ರದಲ್ಲೇ ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇ ಪೂರ್ಣಗೊಳ್ಳಲಿದ್ದು ತ್ವರಿತಗತಿಯಲ್ಲಿ ಪ್ರಯಾಣ ಮಾಡಬಹುದು. ಅಲ್ಲದೇ ರಾಜ್ಯವು ಸಬಲೀಕರಣದ ಹೊಸ ಬ್ರ್ಯಾಂಡ್ ಆಗಲಿದೆ ಎಂದು ಭವಿಷ್ಯ ನುಡಿದರು.
‘ವೆಡ್ ಇನ್ ಇಂಡಿಯಾ’ ಆಂದೋಲನ
ಉತ್ತರಾಖಂಡ ರಾಜ್ಯ ದೇವರ ನಾಡೆಂದು ಬಣ್ಣಿಸಿದ ಮೋದಿ, ಈ ನಾಡಿಗೆ ಸದಾ ಋಣಿಯಾಗಿರುತ್ತೇನೆ. ಈ ಭೂಮಿಗಾಗಿ ಸೇವೆ ಸಲ್ಲಿಸುತ್ತಿರುವ ಎಲ್ಲರೂ ಸೌಭಾಗ್ಯವಂತರು. ಮದುವೆಯನ್ನು ಮೇಲಿರುವ ದೇವರೇ ನಿರ್ಧರಿಸುತ್ತಾನೆಂದು ಹೇಳಿಕೊಂಡು ಬರಲಾಗುತ್ತಿದೆ. ಹೀಗಿರುವಾಗ ದೇಶದ ಶ್ರೀಮಂತರು ಇಲ್ಲಿರುವ ದೇವರ ಪಾದಕ್ಕೆರಗುವ ಬದಲು, ವಿದೇಶಕ್ಕೆ ಹೋಗಿ ಜೀವನ ಪಯಣ ಆರಂಭಿಸುತ್ತಿರುವುದು ಏಕೆ? ಉತ್ತರಾಖಂಡ ಸೇರಿದಂತೆ ಭಾರತದ ಯಾವುದೇ ಪವಿತ್ರ ಧಾರ್ಮಿಕ ಸ್ಥಳದಲ್ಲಿ ಮದುವೆಯಾಗಬಹುದು. ಈ ದೇಶದ ಶ್ರೀಮಂತ ವಿದೇಶದಲ್ಲಿ ಮದುವೆಯಾಗುವ ಬದಲು ದೇಶದಲ್ಲಿಯೇ ಆಗಬೇಕು. ಈ ನಿಟ್ಟಿನಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್‌ಗಳ ಮೂಲಸೌಕರ್ಯ ಅಭಿವೃದ್ಧಿಗೆ ಉತ್ತೇಜನ ನೀಡಲು ‘ಮೇಡ್ ಇನ್ ಇಂಡಿಯಾ’ದಂತೆ ‘ವೆಡ್ ಇನ್ ಇಂಡಿಯಾ’ ಆಂದೋಲನವೂ ಆಗಬೇಕು ಎಂದು ಹೇಳಿದರು.
ಇಂದು ಭಾರತದಲ್ಲಿ ಬದಲಾವಣೆಯ ಬಲವಾದ ಗಾಳಿ ಬೀಸುತ್ತಿದೆ. ಉತ್ತರಾಖಂಡವು ಹೂಡಿಕೆದಾರರಿಗೆ ದೊಡ್ಡ ಮಾರುಕಟ್ಟೆ ಸೃಷ್ಟಿಸುತ್ತಿದೆ. ಉತ್ತರಾಖಂಡ ಸರ್ಕಾರ ಈಗಾಗಲೇ ಹೌಸ್ ಆಫ್ ಹಿಮಾಲಯ ಬ್ರ್ಯಾಂಡ್ ಪ್ರಾರಂಭಿಸಿದೆ. ಇಲ್ಲಿನ ಸ್ಥಳೀಯ ಉತ್ಪನ್ನಗಳನ್ನು ವಿದೇಶಿ ಮಾರುಕಟ್ಟೆಯಲ್ಲಿ ಸ್ಥಾಪಿಸಲು ಇದು ಅತ್ಯಂತ ವಿನೂತನ ಪ್ರಯತ್ನ. ಇದು ವೋಕಲ್ ಫಾರ್ ಲೋಕಲ್ ಮತ್ತು ವೋಕಲ್ ಫಾರ್ ಗ್ಲೋಬಲ್ ಪರಿಕಲ್ಪನೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಇದರೊಂದಿಗೆ ರಾಜ್ಯದ ಉತ್ಪನ್ನಗಳಿಗೆ ವಿದೇಶದಲ್ಲಿ ಮಾರುಕಟ್ಟೆ ಸಿಗಲಿದೆ ಎಂದು ಭರವಸೆ ನೀಡಿದರು.