Tuesday, December 30, 2025

2025ರಲ್ಲಿ ಸುಧಾರಣೆ ಎಕ್ಸ್​ಪ್ರೆಸ್ ಗಾಡಿ ಹತ್ತಿದ ಭಾರತ: ಹೇಗೆ ಅಂತ ಪ್ರಧಾನಿ ಮೋದಿ ಹೇಳ್ತಾರೆ ನೋಡಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

2025ರ ವರ್ಷ ಮುಕ್ತಾವಾಗುತ್ತಿದ್ದು, ಈ ಕ್ಷಣ ಪ್ರಧಾನಿ ಮೋದಿ ಅವರು 2025ರಲ್ಲಿ ಭಾರತದಲ್ಲಿ ಜಾರಿಗೆ ತಂದ ವ್ಯಾಪಕ ಸುಧಾರಣೆಗಳನ್ನು ಲಿಂಕ್ಡ್‌ಇನ್‌ನಲ್ಲಿ ವಿವರಿಸಿದ್ದಾರೆ.

ಭಾರತವು ಸುಧಾರಣೆ ಎಕ್ಸ್​ಪ್ರೆಸ್ ಗಾಡಿ ಹತ್ತಿದೆ. ಈ ದೇಶದ ಜನರೇ ಈ ಎಕ್ಸ್​ಪ್ರೆಸ್​ನ ಎಂಜಿನ್ ಎಂದು ಪ್ರಧಾನಿಗಳು ವ್ಯಾಖ್ಯಾನಿಸಿದ್ದಾರೆ. ಈ ವರ್ಷ ಜಾರಿಯಾದ ಕೆಲ ಸುಧಾರಣೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಜಿಎಸ್​ಟಿ ಸುಧಾರಣೆ, ಆದಾಯ ತೆರಿಗೆ ಇಳಿಕೆ, ಸಣ್ಣ ಉದ್ದಿಮೆಗಳಿಗೆ ರಿಲೀಫ್, ಇನ್ಷೂರೆನ್ಸ್ ಸೆಕ್ಟರ್​ಗೆ ಎಫ್​ಡಿಐ, ಸೆಕ್ಯೂರಿಟೀಸ್ ಮಾರ್ಕೆಟ್ ಸುಧಾರಣೆ, ಸಮುದ್ರ ಆರ್ಥಿಕತೆ ಸುಧಾರಣೆ, ಜನ್ ವಿಶ್ವಾಸ್, ಸುಲಭ ಉದ್ಯಮ ವಾತಾವರಣ, ಕಾರ್ಮಿಕ ಸುಧಾರಣೆ, ವ್ಯಾಪಾರ ಮಾರುಕಟ್ಟೆ ವೃದ್ಧಿ, ಪರಮಾಣ ಶಕ್ತಿ ಸುಧಾರಣೆ, ಗ್ರಾಮೀಣ ಉದ್ಯೋಗ ಖಾತ್ರಿ ಸುಧಾರಣೆ, ಶಿಕ್ಷಣ ಸುಧಾರಣೆ, ಇವುಗಳನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಲೇಖನದಲ್ಲಿ ಪ್ರಸ್ತಾಪಿಸಿದ್ದಾರೆ.

ಜಿಎಸ್​ಟಿ ಸುಧಾರಣೆ
ಶೇ. 5, ಶೇ. 12, ಶೇ. 18 ಮತ್ತು ಶೇ. 28, ಹೀಗೆ ನಾಲ್ಕು ಇದ್ದ ಜಿಎಸ್​ಟಿ ಸ್ಲ್ಯಾಬ್​ಗಳನ್ನು ಎರಡಕ್ಕೆ ಇಳಿಸಲಾಗಿದೆ. ಶೇ. 5 ಮತ್ತು ಶೇ. 18 ಟ್ಯಾಕ್ಸ್ ಸ್ಲ್ಯಾಬ್ ಮಾತ್ರವೇ ಇರುವುದು. ಶೇ. 12 ಮತ್ತು ಶೇ. 28 ಟ್ಯಾಕ್ಸ್ ಸ್ಲ್ಯಾಬ್​ಗಳನ್ನು ರದ್ದು ಮಾಡಲಾಗಿದೆ. ನರೇಂದ್ರ ಮೋದಿ ಅವರು ಈ ಕ್ರಮದಿಂದ ಗ್ರಾಹಕರ ಉತ್ಸಾಹ ಹೆಚ್ಚಿಸಲು ಸಹಾಯವಾಗಿದೆ ಎಂದು ಮೋದಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಸುಗಮ ವ್ಯಾಪಾರ ವಾತಾವರಣ
ಉದ್ದಿಮೆಗಳನ್ನು ಪ್ರೋತ್ಸಾಹಿಸಲು ಸರ್ಕಾರ ಹಲವು ಉತ್ಪನ್ನಗಳಿಗೆ ಕ್ಯುಸಿಒಗಳನ್ನು (ಕ್ವಾಲಿಟಿ ಕಂಟ್ರೋಲ್ ಆರ್ಡರ್) ಹಿಂಪಡೆದಿದೆ. ಸಿಂತೆಟಿಕ್ ಫೈಬರ್, ಯಾರ್ನ್, ಪ್ಲಾಸ್ಟಿಕ್, ಪಾಲಿಮರ್, ಸ್ಟೀಲ್, ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಇತ್ಯಾದಿ ವಿವಿಧ ಕೆಟಗರಿಗಳಲ್ಲಿನ 70ಕ್ಕೂ ಹೆಚ್ಚು ಕ್ಯುಸಿಒಗಳನ್ನು ಕೈಬಿಡಲಾಗಿದೆ. ಇದರಿಂದ ಪಾದರಕ್ಷೆ, ವಾಹನ ಇತ್ಯಾದಿ ಹಲವು ಸೆಕ್ಟರ್​ಗಳಲ್ಲಿ ಉತ್ಪಾದನಾ ವೆಚ್ಚ ಕಡಿಮೆ ಆಗುತ್ತದೆ, ರಫ್ತು ಬೆಲೆ ಹೆಚ್ಚು ಸ್ಪರ್ಧಾತ್ಮಕವಾಗುತ್ತದೆ.

ಸೆಕ್ಯೂರಿಟೀಸ್ ಮಾರ್ಕೆಟ್ ರಿಫಾರ್ಮ್
ಸೆಕ್ಯೂರಿಟೀಸ್ ಮಾರ್ಕೆಟ್ ಕೋಡ್ ಬಿಲ್ ಅನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ. ಸೆಬಿ ಆಡಳಿತ ನಿಯಮಗಳನ್ನು ಇದು ಸುಧಾರಿಸುತ್ತದೆ. ಹೂಡಿಕೆದಾರರಿಗೆ ಹೆಚ್ಚಿನ ಭದ್ರತೆ, ಕಟ್ಟುಪಾಡು ಸಡಿಲಿಕೆಗೆ ನೆರವಾಗುತ್ತದೆ. ತಂತ್ರಜ್ಞಾನ ಶಕ್ತ ಮಾರುಕಟ್ಟೆಯನ್ನು ಬಲಗೊಳಿಸುತ್ತದೆ ಎಂದು ಲಿಂಕ್ಡ್​ಇನ್ ಪೋಸ್ಟ್​ನಲ್ಲಿ ನರೇಂದ್ರ ಮೋದಿ ಬರೆದಿದ್ದಾರೆ.

ಸಾಗರ ಆರ್ಥಿಕತೆಯ ಸುಧಾರಣೆಗಳು
ಮುಂಗಾರು ಅಧಿವೇಶನದಲ್ಲಿ ಲೇಡಿಂಗ್ ಆ್ಯಕ್ಟ್, ಸಮುದ್ರ ಮೂಲಕ ಸರಕು ಸಾಗಣೆ ಮಸೂದೆ, ಕರಾವಳಿ ಸಾಗಣೆ ಮಸೂದೆ, ವ್ಯಾಪಾರಿ ಸಾಗಣೆ ಮಸೂದೆ ಮತ್ತು ಭಾರತೀಯ ಬಂದರುಗಳ ಮಸೂದೆ, ಹೀಗೆ ಒಂದೇ ಅಧಿವೇಶನದಲ್ಲಿ ಸಮುದ್ರ ಆರ್ಥಿಕತೆಯ ಮೇಲೆ ಪರಿಣಾಮ ಬೀರಬಲ್ಲ ಐದು ಬಿಲ್​ಗಳನ್ನು ಮಂಡಿಸಲಾಗಿದೆ. ಹಲವಾರು ದಶಕಗಳ ಹಿಂದಿನ ಕಾಯ್ದೆಗಳಿಗೆ ಸುಧಾರಣೆಗಳನ್ನು ತರಲಾಗಿದೆ.

ಗ್ರಾಮೀಣ ಉದ್ಯೋಗ ಖಾತ್ರಿಯಲ್ಲಿ ಸುಧಾರಣೆ
ಸರ್ಕಾರವು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಹೊಸ ಸ್ವರೂಪ ಕೊಟ್ಟಿದೆ. ವಿಕಸಿತ ಭಾರತ ಜಿ ರಾಮ್ ಜಿ ಕಾಯ್ದೆ ಜಾರಿಗೆ ತರುತ್ತಿದೆ. ಮನ್ರೇಗಾ ಬದಲು ಈ ಹೊಸ ಕಾಯ್ದೆ ಬರುತ್ತದೆ. ವರ್ಷಕ್ಕೆ ಖಾತ್ರಿ ಉದ್ಯೋಗ ಕೊಡಲಾಗುವ ದಿನಗಳ ಸಂಖ್ಯೆಯನ್ನು 100ರಿಂದ 125ಕ್ಕೆ ಹೆಚ್ಚಿಸಲಾಗಿರುವುದು ಸೇರಿದಂತೆ ಕೆಲ ಮಹತ್ವದ ಸುಧಾರಣೆಗಳನ್ನು ತರಲಾಗಿದೆ. ಇದರಿಂದ ಗ್ರಾಮೀಣ ಭಾಗದ ಜನರಿಗೆ ಹೆಚ್ಚಿನ ಆದಾಯ ಹರಿವು ಸಿಗಲು ಅವಕಾಶ ಇರುತ್ತದೆ.

ಭಾರತೀಯ ಉತ್ಪನ್ನಗಳಿಗೆ ಜಾಗತಿಕವಾಗಿ ಹೆಚ್ಚು ಮಾರುಕಟ್ಟೆ
2025ರಲ್ಲಿ ನ್ಯೂಜಿಲ್ಯಾಂಡ್, ಓಮನ್ ಮತ್ತು ಬ್ರಿಟನ್ ಜೊತೆ ಭಾರತ ಟ್ರೇಡ್ ಡೀಲ್ ಮಾಡಿಕೊಂಡಿದೆ. ಇದರಿಂದ ಭಾರತದ ಹಲವು ಉತ್ಪನ್ನಗಳಿಗೆ ಈ ದೇಶಗಳು ಆಮದು ಸುಂಕವನ್ನು ರದ್ದು ಮಾಡಬಹುದು, ಅಥವಾ ಕಡಿಮೆ ಮಾಡಬಹುದು. ಇದರಿಂದ ಹೆಚ್ಚಿನ ಮಾರುಕಟ್ಟೆ ಪ್ರವೇಶ ಸಿಗುತ್ತದೆ. ಸ್ವಿಟ್ಜರ್​ಲ್ಯಾಂಡ್, ನಾರ್ವೆ, ಐಸ್​ಲ್ಯಾಂಡ್ ಮತ್ತು ಲೀಕ್ಟನ್​ಸ್ಟೀನ್ ದೇಶಗಳಿರುವ ಯೂರೋಪಿಯನ್ ಫ್ರೀ ಟ್ರೇಡ್ ಅಸೋಸಿಯೇಶನ್ ಜೊತೆಗೂ ಭಾರತ ಎಫ್​ಟಿಎ ಮಾಡಿಕೊಂಡಿದೆ.

ಶಿಕ್ಷಣ ಸುಧಾರಣೆಗಳು
ಸಂಸತ್​ನಲ್ಲಿ ವಿಕಸಿತ ಭಾರತ ಶಿಕ್ಷಾ ಅಧಿಸ್ಥಾನ್ ಮಸೂದೆಯನ್ನು ಮಂಡಿಸಲಾಗಿದೆ. ಇದು ಕಾಯ್ದೆಯಾದರೆ, ಏಕೀಕೃತ ಉನ್ನತ ಶಿಕ್ಷಣ ನಿಯಂತ್ರಕ ಸಂಸ್ಥೆ ಸ್​ಥಾಪಿತವಾಗುತ್ತದೆ. ಯುಜಿಸಿ, ಎಐಸಿಟಿಇ, ಎನ್​ಸಿಟಿಇ ಇತ್ಯಾದಿ ವಿವಿಧ ರೆಗ್ಯುಲೇಟರಿ ಸಂಸ್ಥೆಗಳ ಬದಲು ಒಂದೇ ಸಂಸ್ಥೆಯು ನಿಯಂತ್ರಕವಾಗಿ ಇರುತ್ತದೆ.

error: Content is protected !!