ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನವು ಸೇನಾ ನೆಲೆಗಳನ್ನು ಗುರಿಯಾಗಿಸಿಕೊಳ್ಳುವುದನ್ನು ನಿಲ್ಲಿಸದಿದ್ದರೆ ಭಾರತ ಸೂಕ್ತ ಉತ್ತರವನ್ನು ನೀಡುತ್ತಲೇ ಇರುತ್ತದೆ ಎಂದು ವಿದೇಶಾಂಗ ಸಚಿವಾಲಯ ಖಡಕ್ ಸೂಚನೆ ನೀಡಿದೆ.
ಪಾಕಿಸ್ತಾನದ ಮೇಲೆ ಭಾರತ ನಡೆಸಿದ 2ನೇ ದಾಳಿಯ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿ ವಿದೇಶಾಂಗ ಸಚಿವಾಲಯ ಹಾಗೂ ಭಾರತೀಯ ಸೇನೆ ಮಾಹಿತಿ ನೀಡಿದೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿ,ಇಂದು ಬೆಳಿಗ್ಗೆ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ಹಲವಾರು ಸ್ಥಳಗಳಲ್ಲಿ ವಾಯು ರಕ್ಷಣಾ ರಾಡಾರ್‌ಗಳು ಮತ್ತು ವ್ಯವಸ್ಥೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ ಎಂದು ಹೇಳಿದರು. ಲಾಹೋರ್‌ನಲ್ಲಿರುವ ವಾಯು ರಕ್ಷಣಾ ವ್ಯವಸ್ಥೆಯನ್ನು ತಟಸ್ಥಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನವು ಕದನ ವಿರಾಮ ಉಲ್ಲಂಘನೆಯನ್ನು ತೀವ್ರಗೊಳಿಸಿದೆ. ಇದರ ಪರಿಣಾಮವಾಗಿ 16 ಜೀವಗಳು ಬಲಿಯಾಗಿವೆ. ಪಾಕಿಸ್ತಾನವೇ ಭಾರತವನ್ನು ಪ್ರತೀಕಾರಕ್ಕೆ ಒತ್ತಾಯಿಸಿದೆ ಎಂದು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಹೇಳಿದ್ದಾರೆ.
ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ, ಬಾರಾಮುಲ್ಲಾ, ಉರಿ, ಪೂಂಚ್, ಮೆಂಧರ್ ಮತ್ತು ರಾಜೌರಿ ವಲಯಗಳಲ್ಲಿನ ಪ್ರದೇಶಗಳಲ್ಲಿ ಮಾರ್ಟರ್‌ಗಳು ಮತ್ತು ಹೆವಿ-ಕ್ಯಾಲಿಬರ್ ಫಿರಂಗಿಗಳನ್ನು ಬಳಸಿಕೊಂಡು ನಿಯಂತ್ರಣ ರೇಖೆಯಾದ್ಯಂತ ತನ್ನ ಅಪ್ರಚೋದಿತ ಗುಂಡಿನ ದಾಳಿಯ ತೀವ್ರತೆಯನ್ನು ಹೆಚ್ಚಿಸಿದೆ. ಪಾಕಿಸ್ತಾನದ ಗುಂಡಿನ ದಾಳಿಯಿಂದಾಗಿ ಮೂವರು ಮಹಿಳೆಯರು ಮತ್ತು ಐದು ಮಕ್ಕಳು ಸೇರಿದಂತೆ ಹದಿನಾರು ಅಮಾಯಕರು ಬಲಿಯಾಗಿದ್ದಾರೆ. ಪಾಕಿಸ್ತಾನದಿಂದ ಬಂದಿರುವ ಮಾರ್ಟರ್ ಮತ್ತು ಫಿರಂಗಿ ಗುಂಡಿನ ದಾಳಿಯನ್ನು ನಿಲ್ಲಿಸಲು ಭಾರತವು ಪ್ರತಿಕ್ರಿಯಿಸಬೇಕಾಯಿತು ಎಂದು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಹೇಳಿದ್ದಾರೆ.
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮಾತನಾಡಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪಹಲ್ಗಾಮ್ ಬಗ್ಗೆ ಮಾತುಕತೆ ನಡೆಯುತ್ತಿದ್ದಾಗ, ಪಾಕಿಸ್ತಾನವು ಟಿಆರ್‌ಎಫ್ (ದಿ ರೆಸಿಸ್ಟೆನ್ಸ್ ಫ್ರಂಟ್) ಪಾತ್ರವನ್ನು ವಿರೋಧಿಸಿತು. ದಾಳಿಯ ಹೊಣೆಯನ್ನು ಟಿಆರ್‌ಎಫ್ ಒಮ್ಮೆ ಅಲ್ಲ, ಎರಡು ಬಾರಿ ಹೊತ್ತುಕೊಂಡ ನಂತರ ಪಾಕಿಸ್ತಾನ ಆ ದಾಳಿಯನ್ನು ವಿರೋಧಿಸಿತು. ನಮ್ಮ ಉದ್ದೇಶವು ವಿಷಯಗಳನ್ನು ಉಲ್ಬಣಗೊಳಿಸುವುದಲ್ಲ. ನಮ್ಮ ಮೇಲಿನ ದಾಳಿಗೆ ಮಾತ್ರ ಪ್ರತಿಕ್ರಿಯಿಸುತ್ತಿದ್ದೇವೆ. ನಾವು ಯಾವುದೇ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡಿಲ್ಲ/ ಪಾಕಿಸ್ತಾನದಲ್ಲಿ ಭಯೋತ್ಪಾದಕ ಮೂಲಸೌಕರ್ಯವನ್ನು ಮಾತ್ರ ಹೊಡೆಯಲಾಗಿದೆ. ಆದರೆ, ಪಾಕಿಸ್ತಾನ ಉಗ್ರರ ಮೃತದೆಹಗಳಿಗೆ ಸರ್ಕಾರಿ ಗೌರವ ನೀಡಿ ಅಂತ್ಯಕ್ರಿಯೆ ನೆರವೇರಿಸಿದೆ ಎಂದು ಟೀಕಿಸಿದ್ದಾರೆ.
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ನೇತೃತ್ವದ ‘ಆಪರೇಷನ್ ಸಿಂಧೂರ್‘ ಕುರಿತಾದ MEA ಪತ್ರಿಕಾಗೋಷ್ಠಿಯಲ್ಲಿ ಕರ್ನಲ್ ಸೋಫಿಯಾ ಖುರೇಷಿ, ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು MEA ವಕ್ತಾರ ರಣಧೀರ್ ಜೈಸ್ವಾಲ್ ಕೂಡ ಭಾಗವಹಿಸಿದ್ದರು.