ಹೊಸದಿಗಂತ ಡಿಜಿಟಲ್ ಡೆಸ್ಕ್:
ಮ್ಯಾನ್ಮಾರ್‌ನ ನಿಷೇಧಿತ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ-ಇಂಡಿಪೆಂಡೆಂಟ್ (ULFA) ತನ್ನ ಪೂರ್ವ ಪ್ರಧಾನ ಕಚೇರಿಯ ಮೇಲೆ ಭಾರತೀಯ ಸೇನೆಯು ಡ್ರೋನ್ ದಾಳಿ ನಡೆಸಿದೆ . ಇದರಲ್ಲಿ ಹಿರಿಯ ಉಲ್ಫಾ-ಐ ಕಮಾಂಡರ್ ಸೇರಿದಂತೆ 19 ಮಂದಿ ಸಾವನ್ನಪ್ಪಿದ್ದು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಆರೋಪಿಸಿದೆ.
ಉಲ್ಫಾ (ಐ) ಮತ್ತೊಂದು ಹೇಳಿಕೆಯಲ್ಲಿ, ತನ್ನ ಮೃತ ಸದಸ್ಯನ ಅಂತ್ಯಕ್ರಿಯೆ ನಡೆಸುತ್ತಿದ್ದಾಗ ತನ್ನ ಶಿಬಿರದ ಮೇಲೆ ಕ್ಷಿಪಣಿ ದಾಳಿ ನಡೆದಿದೆ ಎಂದು ಹೇಳಿಕೊಂಡಿದೆ. ‘ಬ್ರಿಗೇಡಿಯರ್’ ಗಣೇಶ್ ಅಸೋಮ್ ಮತ್ತು ‘ಕರ್ನಲ್’ ಪ್ರದೀಪ್ ಅಸೋಮ್ ಎಂಬ ಇಬ್ಬರು ಹಿರಿಯ ಸದಸ್ಯರು ಸಾವನ್ನಪ್ಪಿದ್ದು ಇತರ ಅನೇಕ ಸದಸ್ಯರು ಮತ್ತು ನಾಗರಿಕರು ಗಾಯಗೊಂಡಿದ್ದಾರೆ ಎಂದು ಸಂಘಟನೆ ತಿಳಿಸಿದೆ.
ಆದ್ರೆ ಭಾರತೀಯ ಸೇನೆಯು ಉಲ್ಫಾ-ಐನ ಹೇಳಿಕೆಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದು, ಗುವಾಹಟಿಯಲ್ಲಿ ಮಾತನಾಡಿದ ರಕ್ಷಣಾ ಸಾರ್ವಜನಿಕ ಸಂಪರ್ಕ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಮಹೇಂದ್ರ ರಾವತ್, ಅಂತಹ ಯಾವುದೇ ಕಾರ್ಯಾಚರಣೆಯ ಬಗ್ಗೆ ಭಾರತೀಯ ಸೇನೆಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರು.
ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂದ (United Liberation Front of Assam) ಅನ್ನು ಏಪ್ರಿಲ್ 7, 1979 ರಂದು ಅಸ್ಸಾಂನ ಶಿವಸಾಗರ್‌ನಲ್ಲಿ ಪರೇಶ್ ಬರುವಾ ಮತ್ತು ಅರಬಿಂದ ರಾಜಖೋವಾ ಸೇರಿದಂತೆ ಕೆಲವು ಯುವಕರು, ಅಸ್ಸಾಮಿ ಸಂಸ್ಕೃತಿಗಾಗಿ ಹೋರಾಟಕ್ಕಾಗಿ ಸ್ಥಾಪಿಸಿದರು. ಆದರೆ, ತದನಂತರ ಅಸ್ಸಾಮಿ ಜನರಿಗೆ ಸಶಸ್ತ್ರ ಹೋರಾಟವನ್ನು ಕಲಿಸಿಕೊಟ್ಟು, ಪ್ರತ್ಯಕ ರಾಷ್ಟ್ರಕ್ಕಾಗಿ ಹೋರಾಡಲು ಮುಂದಾದರು. ಇದಾದ ನಂತರ, ಕೇಂದ್ರ ಸರ್ಕಾರ, ಭಾರತ ವಿರೋಧಿ ಚಟುವಟಿಕೆ ಎಂದು ಸಂಘಟನೆಯನ್ನು ನಿಷೇಧಿಸಿತ್ತು.