ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಆಪರೇಷನ್ ಸಿಂಧೂರ್ ಅಡಿಯಲ್ಲಿ ಭಾರತೀಯ ಸಶಸ್ತ್ರ ಪಡೆಗಳು ತೆಗೆದುಕೊಂಡ ಕ್ರಮಗಳು ಪಾಕಿಸ್ತಾನದ ಸೇನೆಯನ್ನು ಮಂಡಿಯೂರುವಂತೆ ಮಾಡಿವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಲಕ್ನೋದಲ್ಲಿ ನಡೆದ ಕೆಎನ್‌ಎಸ್ ಸ್ಮಾರಕ ಆಸ್ಪತ್ರೆಯ 25ನೇ ವಾರ್ಷಿಕೋತ್ಸವದ ಆಚರಣೆಯಲ್ಲಿ ಮಾತನಾಡಿದ ಅವರು ಭಾರತ ನಡೆಸಿದ ಪ್ರತೀಕಾರದ ದಾಳಿಯ ಸಮಯದಲ್ಲಿ, ಪಾಕಿಸ್ತಾನದಲ್ಲಿನ ನಾಗರಿಕರಿಗೆ ಹಾನಿಯಾಗದಂತೆ ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಹೇಳಿದರು.
ಇದೇ ವೇಳೆ ಸಶಸ್ತ್ರ ಪಡೆಗಳು ಮತ್ತು ಶಸ್ತ್ರಚಿಕಿತ್ಸಕರ ನಡುವಿನ ಹೋಲಿಕೆಯನ್ನು ವಿವರಿಸಿದ ರಾಜನಾಥ್ ಸಿಂಗ್, ಒಬ್ಬ ನುರಿತ ಸರ್ಜನ್ ರೀತಿಯಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಕಾರ್ಯಾಚರಣೆಯನ್ನು ನಡೆಸಿವೆ. ಇದಕ್ಕಾಗಿ ನಾನು ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಮತ್ತು ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಗಡಿಯುದ್ದಕ್ಕೂ ಭಯೋತ್ಪಾದನೆಯ ಬೇರುಗಳನ್ನು ನಿಖರತೆ ಮತ್ತು ಶಿಸ್ತಿನಿಂದ ಗುರಿಯಾಗಿಸಿಕೊಂಡವು. ಒಬ್ಬ ಶಸ್ತ್ರಚಿಕಿತ್ಸಕ ತನ್ನ ಉಪಕರಣಗಳನ್ನು ರೋಗ ಇರುವಲ್ಲಿ ನಿಖರವಾಗಿ ಬಳಸುತ್ತಾನೆ. ಭಾರತೀಯ ಪಡೆಗಳು ಅದೇ ರೀತಿ ಮಾಡಿವೆ. ವೈದ್ಯರು ಆರೋಗ್ಯವನ್ನು ರಕ್ಷಿಸಿದರೆ ಸೈನಿಕರು ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸುತ್ತಾರೆ ಎಂದು ಅವರು ಹೇಳಿದ್ದಾರೆ.