ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಬಹು ದೊಡ್ಡ ವಿವಾದವನ್ನು ಸೃಷ್ಠಿಸಿದ್ದಾರೆ. ಪ್ರಚಾರ ರ್ಯಾಲಿಯಲ್ಲಿ ಭಾರತೀಯ ಸೇನೆಯು ದೇಶದ ಜನಸಂಖ್ಯೆಯ ಶೇಕಡಾ 10 ರಷ್ಟು ಜನರ ನಿಯಂತ್ರಣದಲ್ಲಿದೆ ಎಂದು ಮೇಲ್ಜಾತಿಗಳನ್ನು ಉಲ್ಲೇಖಿಸಿ ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ.
ನೀವು ಸೂಕ್ಷ್ಮವಾಗಿ ಗಮನಿಸಿದರೆ, ದೇಶದ ಜನಸಂಖ್ಯೆಯ ಶೇ. 90 ರಷ್ಟು ಜನರು ದಲಿತರು, ಮಹಾ ದಲಿತರು, ಹಿಂದುಳಿದವರು, ಅತ್ಯಂತ ಹಿಂದುಳಿದವರು ಅಥವಾ ಅಲ್ಪಸಂಖ್ಯಾತ ಸಮುದಾಯಗಳಿಂದ ಬಂದವರು. ಶೇ. 90 ರಷ್ಟು ಜನರು ಸಮಾಜದ ಅತ್ಯಂತ ಹಿಂದುಳಿದ ಮತ್ತು ಬುಡಕಟ್ಟು ವರ್ಗಗಳಿಂದ ಬಂದವರು ಎಂದು ಹೇಳಿದರು.
ದೇಶದ ಜನಸಂಖ್ಯೆಯ ಶೇ. 90 ರಷ್ಟು ಜನರಿಗೆ ಸ್ಥಳಾವಕಾಶವಿರುವ, ಜನರು ಘನತೆ ಮತ್ತು ಸಂತೋಷದಿಂದ ಬದುಕಬಹುದಾದ ಭಾರತವನ್ನು ನಾವು ಬಯಸುತ್ತೇವೆ. ಕಾಂಗ್ರೆಸ್ ಯಾವಾಗಲೂ ಹಿಂದುಳಿದವರಿಗಾಗಿ ಹೋರಾಡಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಬಿಜೆಪಿ ನಾಯಕ ಸುರೇಶ್ ನಖುವಾ ಖಂಡಿಸಿದ್ದು, ರಾಹುಲ್ ಗಾಂಧಿ ಈಗ ಸಶಸ್ತ್ರ ಪಡೆಗಳಲ್ಲಿ ಜಾತಿಯನ್ನು ಹುಡುಕುತ್ತಿದ್ದಾರೆ ಮತ್ತು ಶೇ. 10 ರಷ್ಟು ಜನರು ಅದನ್ನು ನಿಯಂತ್ರಿಸುತ್ತಾರೆ ಎಂದು ಹೇಳುತ್ತಾರೆ. ಪ್ರಧಾನಿ ಮೋದಿ ಮೇಲಿನ ದ್ವೇಷದಲ್ಲಿ, ಅವರು ಈಗಾಗಲೇ ಭಾರತವನ್ನು ದ್ವೇಷಿಸುವ ಗೆರೆಯನ್ನು ದಾಟಿದ್ದಾರೆ ಎಂದು ಹೇಳಿದರು.

