ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ಭಾರತೀಯ ದೂತಾವಾಸ ಕಚೇರಿಗೆ ಖಲಿಸ್ತಾನಿ ಪರ ಬೆಂಬಲಿಗರು
ಬೆಂಕಿ ಹಚ್ಚಿದ್ದಾರೆ.
ಭಾನುವಾರ ಮುಂಜಾನೆ 1:30 ರಿಂದ 2:30 ರ ನಡುವೆ ಈ ಘಟನೆ ನಡೆದಿದೆ ಎಂದು ಸ್ಯಾನ್ ಫ್ರಾನ್ಸಿಸ್ಕೋ ಮಾಧ್ಯಮಗಳು ವರದಿ ಮಾಡಿವೆ. ಕೂಡಲೇ ಸ್ಯಾನ್ ಫ್ರಾನ್ಸಿಸ್ಕೋ ಅಗ್ನಿಶಾಮಕ ಇಲಾಖೆ ಅದನ್ನು ತಕ್ಷಣವೇ ನಂದಿಸಿದೆ ಎಂದು ತಿಳಿದುಬಂದಿದೆ.
ಕಳೆದ ಐದು ತಿಂಗಳಲ್ಲಿ ಖಲಿಸ್ತಾನಿ ಬೆಂಬಲಿಗರು ನಡೆಸಿದ ಎರಡನೇ ವಿಧ್ವಂಸಕ ಕೃತ್ಯ ಇದಾಗಿದೆ. ಭಾರತೀಯ ದೂತವಾಸ ಕಚೇರಿಗೆ ಬೆಂಕಿ ಹಚ್ಚಲಾದ ವಿಡಿಯೋವನ್ನು ಅಲ್ಲಿನ ಸ್ಥಳೀಯ ಟಿವಿ ಚಾನೆಲ್ ದಿಯಾ ಟಿವಿ ಹಂಚಿಕೊಂಡಿದೆ.
ಖಲಿಸ್ತಾನ್ ಬೆಂಬಲಿಗರು ಘಟನೆಗೆ ಸಂಬಂಧಿಸಿದಂತೆ ವಿಡಿಯೋವನ್ನು ಸಹ ಬಿಡುಗಡೆ ಮಾಡಿದ್ದಾರೆ ಎಂದೂ ವರದಿಯಾಗಿದೆ. ಈ ಘಟನೆಯಿಂದ ಕಚೇರಿಗೆ ಹೆಚ್ಚಿನ ಹಾನಿಯಾಗಿಲ್ಲ, ಹಾಗೆಯೇ ಯಾರಿಗೂ ಗಾಯವಾಗಿಲ್ಲ, ಯಾರ ಪ್ರಾಣವೂ ಹೋಗಿಲ್ಲ ಎಂದು ವರದಿಯಾಗಿದೆ.
ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ದೂತಾವಾಸಕ್ಕೆ ಧ್ವಂಸ ಮತ್ತು ಬೆಂಕಿ ಹಚ್ಚುವ ಯತ್ನವನ್ನು ಯುಎಸ್ ಬಲವಾಗಿ ಖಂಡಿಸುತ್ತದೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್ ಟ್ವೀಟ್ ಮಾಡಿದ್ದಾರೆ.
ಅಮೆರಿಕದಲ್ಲಿ ರಾಜತಾಂತ್ರಿಕ ಸೌಲಭ್ಯಗಳು ಅಥವಾ ವಿದೇಶಿ ರಾಜತಾಂತ್ರಿಕರ ವಿರುದ್ಧ ವಿಧ್ವಂಸಕತೆ ಅಥವಾ ಹಿಂಸಾಚಾರವು ಕ್ರಿಮಿನಲ್ ಅಪರಾಧವಾಗಿದೆ ಎಂದು ಹೇಳಿದ್ದಾರೆ.