ಭಾರತೀಯ ಸಂಸ್ಕೃತಿ ಮಹಿಳೆಯರಿಗೆ ಸಮಾಜದಲ್ಲಿ ಉತ್ಕೃಷ್ಟ ಹಾಗೂ ಪೂಜನೀಯ ಸ್ಥಾನ ಒದಗಿಸಿದೆ: ಡಾ. ಪ್ರೀತಿ ಭಂಡಾರಕರ

ಹೊಸದಿಗಂತ ವರದಿ ಹುಬ್ಬಳ್ಳಿ:

ಭಾರತೀಯ ಸಂಸ್ಕೃತಿಯು ಮಹಿಳೆಯರಿಗೆ ಸಮಾಜದಲ್ಲಿ ಉತ್ಕೃಷ್ಟ ಹಾಗೂ ಪೂಜನೀಯ ಸ್ಥಾನ ಒದಗಿಸಿದೆ ಎಂದು ಕುಮುಟಾದ ಕಮಲಾ‌ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯರಾದ ಡಾ. ಪ್ರೀತಿ ಭಂಡಾರಕರ ಹೇಳಿದರು.

ನಗರದ ವಾಸವಿ ಮಹಲ್ ನಲ್ಲಿ ಸಂಸ್ಕೃತಿ ಟ್ರಸ್ಟ್ ವತಿಯಿಂದ ನಡೆದ ಧಾರವಾಡ ವಿಭಾಗದ ಶಕ್ತಿ ಸಂಚಯ ಜಾಗೃತ ಮಹಿಳೆಯರ ಸಮಾವೇಶದಲ್ಲಿ ಭಾರತೀಯ ಚಿಂತನೆಯಲ್ಲಿ ಮಹಿಳೆ ಕುರಿತು ಅವರು ಮಾತನಾಡಿದರು.

ಇಡೀ ಲೋಕದ ಒಳಿತನ್ನು ಬಯಸುವುದು ಭಾರತೀಯ ಸಂಸ್ಕೃತಿಯಾಗಿದೆ. ಈ ಸಂಸ್ಕೃತಿ ಅನಾದಿ ಕಾಲದಿಂದಲೂ ಇದೆ. ಪ್ರತಿಯೊಬ್ಬ ಸ್ತ್ರೀಯಲ್ಲೂ ಶಕ್ತಿ ಇದೆ‌. ಸಮಾಜ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ಅದನ್ನು ಜಾಗೃತಗೊಳಿಸುವುದು ಅವಶ್ಯ. ಸ್ತ್ರೀಯರಿಗೆ ಶಿಕ್ಷಣ, ಸ್ವಾತಂತ್ರ್ಯ ಇರಲಿಲ್ಲ ಎಂಬ ಮಿಥ್ಯವನ್ನೇ ಅನೇಕ ಬಾರಿ ಕೇಳಿದ್ದೇವೆ. ಹೇಗೆ ಋಷಿಗಳು ಇದ್ದರು ಹಾಗೇ ಋಷಿಕೆಯರು, ಬ್ರಹ್ಮಚಾರಿಣಿಯರು, ಮಂತ್ರ ದೃಷ್ಟಾರೆಯರು ಸಹ ಹಿಂದೆ ಇದ್ದರು. ಋಷಿಗಳು ಹಾಗೆ ಬ್ರಹ್ಮ ಜ್ಞಾನ ಪಡೆದು ಸ್ತ್ರೀಯರು ಋಷಿಕೆಯರಾಗುತ್ತಿದ್ದರು. ಋಷಿಗಳಂತೆ ವೇದಮಂತ್ರ ಪಡಿಸುತ್ತಿದ್ದರು ಎಂದರು.

ವಿಧವೆಯರನ್ನೂ ಸಹ ಸುಮಂಗಲೆಯರಂತೆ ಕಾಣಬೇಕು ಎಂದು ವೇದದಲ್ಲಿ ಉಲ್ಲೇಖವಿದೆ. ವೇದ ಕಾಲದ ಸ್ತ್ರೀಯರು 8-16 ವರ್ಷದವರೆಗೆ ಶಿಕ್ಷಣ ಪಡೆಯುತ್ತಿದ್ದರು. ಉನ್ನತ ಆರ್ಥಿಕ ಸ್ವಾತಂತ್ರ್ಯ ಹೊಂದಿದ್ದ ಸ್ತ್ರೀ ತನ್ನ ಕುಟುಂಬದ ನಿರ್ವಹಣೆಯ ಜವಾಬ್ದಾರಿ ಸಹ ಹೊಂದಿದ್ದಳು ಎಂದು ತಿಳಿಸಿದರು.

ಮನು ಹೇಳಿದ ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ ಎಂಬ ಉಕ್ತಿಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಬಾಲ್ಯದಲ್ಲಿ ತಂದೆಯಿಂದ, ಯೌವನದಲ್ಲಿ ಪತಿಯಿಂದ, ವೃದ್ಧಾಪ್ಯದಲ್ಲಿ ಮಕ್ಕಳಿಂದ ಹೀಗೆ ಸಮಾಜದಲ್ಲಿ ಪೂಜ್ಯ ಸ್ಥಾನದಲ್ಲಿರುವ ಸ್ತ್ರೀಯರನ್ನ ಸದಾ ರಕ್ಷಿಸಬೇಕೆಂದು ಮನುವಿನ ಉಕ್ತಿಯ ಭಾವಾರ್ಥವಾಗಿದೆ ಎಂದರು.

ವಿವಾಹ ಸಂದರ್ಭದಲ್ಲೂ ತನ್ನ ಇಚ್ಛೆಯ ವರನನ್ನು ಆರಿಸಿಕೊಳ್ಳಲು ಸ್ತ್ರೀಗೆ ಸಂಪೂರ್ಣ ಸ್ವಾತಂತ್ರ್ಯವಿತ್ತು. ಆಗಿನ‌ ಅವಿಭಕ್ತ ಕುಟುಂಬಗಳ ಕೇಂದ್ರ ಬಿಂದು ಗೃಹಿಣಿಯಾಗಿದ್ದಳು. ಪ್ರಸ್ತುತ ಲವ್ ಇನ್ ರಿಲೇಷನ್, ಡೇಟಿಂಗ್, ವಿಭಕ್ತ ಕುಟುಂಬ ಮುಂತಾದ ಪಾಶ್ಚಾತ್ಯರ ಅನುಕರಣೆಯಿಂದ ಸಮಾಜಕ್ಕೆ ಧಕ್ಕೆಯಾಗುತ್ತಿದೆ. ಸ್ತ್ರೀ ಶಕ್ತಿಯ ಜಾಗರಣದಿಂದ ಸಮಾಜ ಸದೃಢಗೊಳುಸುವುದು ಅನಿವಾರ್ಯ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!