ಹೊಸದಿಗಂತ ಡಿಜಿಟಲ್ ಡೆಸ್ಕ್ :
12 ಭಾರತೀಯರು ಸೇರಿದಂತೆ 17 ಜನರ ಸಾವಿಗೆ ಕಾರಣವಾದ 2019ರ ಬಸ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಭಾರತೀಯನಿಗೆ 5 ಮಿಲಿಯನ್ (₹ 11 ಕೋಟಿಗೂ ಹೆಚ್ಚು) ಪರಿಹಾರವನ್ನು ನೀಡಲಾಗಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.
20 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ಮುಹಮ್ಮದ್ ಬೇಗ್ ಮಿರ್ಜಾ ಅವರು ಒಮಾನ್ ನಿಂದ ಯುಎಇಗೆ ಪ್ರಯಾಣಿಸುತ್ತಿದ್ದ ಬಸ್ ದುಬೈನಲ್ಲಿ ಅಪಘಾತಕ್ಕೀಡಾಗಿತ್ತು. ಬಸ್‌ನಲ್ಲಿದ್ದ 31 ಪ್ರಯಾಣಿಕರಲ್ಲಿ 17 ಮಂದಿ ಸಾವನ್ನಪ್ಪಿದರು, ಅವರಲ್ಲಿ 12 ಮಂದಿ ಭಾರತೀಯರು ಎಂದು ಖಲೀಜ್ ಟೈಮ್ಸ್ ಪತ್ರಿಕೆ ವರದಿ ಮಾಡಿತ್ತು.
ಇಲ್ಲಿನ ಮೆಟ್ರೋ ನಿಲ್ದಾಣದ ಪಾರ್ಕಿಂಗ್ ನ ಪ್ರವೇಶ ಕೇಂದ್ರದ ಬಳಿ ಬಸ್ ಚಾಲಕ ಓವರ್ ಹೆಡ್ ಹೈಟ್ ಬ್ಯಾರಿಯರ್‌ಗೆ ಡಿಕ್ಕಿ ಹೊಡೆದಾಗ ಅಪಘಾತ ಸಂಭವಿಸಿತ್ತು.
ಓಮನ್ ಮೂಲದ ಚಾಲಕನಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಸಂತ್ರಸ್ತರ ಕುಟುಂಬಗಳಿಗೆ 3.4 ಮಿಲಿಯನ್ ಹಣವನ್ನು ಪಾವತಿಸಲು ಆದೇಶಿಸಲಾಗಿದೆ.
ಮುಹಮ್ಮದ್ ಬೇಗ್ ಮಿರ್ಜಾ ಅವರ ವಕೀಲರ ಪ್ರಕಾರ, ಯುಎಇ ವಿಮಾ ಪ್ರಾಧಿಕಾರ ಪ್ರಾಥಮಿಕ ರಾಜಿ ನ್ಯಾಯಾಲಯವು ಆರಂಭದಲ್ಲಿ ಅವರಿಗೆ ಪರಿಹಾರವಾಗಿ 1 ಮಿಲಿಯನ್ ದಿರ್ಹಂ ನೀಡಿತ್ತು. ನಂತರ ಅರ್ಜಿದಾರರು ದುಬೈ ಫಸ್ಟ್ ಇನ್‌ಸ್ಟಾನ್ಸ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದಾಗ ಪರಿಹಾರದ ಅಂಕಿಅಂಶವನ್ನು 5 ಮಿಲಿಯನ್ ದಿರ್ಹಮ್ ಗೆ ಏರಿಸುವಂತೆ ತೀರ್ಪು ನೀಡಿತು.
ಮಿರ್ಜಾ ಅವರು ತಮ್ಮ ಸಂಬಂಧಿಕರೊಂದಿಗೆ ರಜಾದಿನಗಳನ್ನು ಕಳೆದ ನಂತರ ಮಸ್ಕತ್ ನಿಂದ ತೆರಳುತ್ತಿದ್ದಾಗ ಅಪಘಾತ ಸಂಭವಿಸಿ ತೀವ್ರವಾಗಿ ಗಾಯಗೊಂಡಿದ್ದರು. 14 ದಿನಗಳ ಕಾಲ ಪ್ರಜ್ಞಾಹೀನರಾಗಿದ್ದ ಅವರು ಎರಡು ತಿಂಗಳ ಕಾಲ ದುಬೈನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದರು.
ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ ಅಧ್ಯಯನ ಮಾಡುತ್ತಿದ್ದ ಅವರು ಅಂತಿಮ ಸೆಮಿಸ್ಟರ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಅಪಘಾತದ ಕಾರಣದಿಂದ ಅವರ ಅಧ್ಯಯನವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.
ಅಪಘಾತದಲ್ಲಿ ಮಿರ್ಜಾ ಅವರ ಮೆದುಳಿಗೆ ತೀವ್ರ ಹಾನಿಯಾಗಿದೆ, ಇದರಿಂದಾಗಿ ಅವರು ಸಾಮಾನ್ಯ ಜೀವನಕ್ಕೆ ಮರಳುವ ಸಾಧ್ಯತೆಗಳು ತೀರಾ ಕಡಿಮೆ ಎಂದು ವೈದ್ಯರು ಹೇಳಿದ್ದಾರೆ.