ಹೊಸದಿಗಂತ ಡಿಜಿಟಲ್ ಡೆಸ್ಕ್
ನೇಪಾಳದ ಪರ್ವತ ಶಿಖರವಾದ ಕಾಂಚನಜುಂಗಾ ಶಿಖರ ಏರುವಾಗ ಭಾರತೀಯ ಪರ್ವಾತಾರೋಹಿಯೊಬ್ಬರು ಸಾವನ್ನಪ್ಪಿರುವ ಬಗ್ಗೆ ಪರ್ವತಾರೋಹಣ ಯಾತ್ರೆಯ ಸಂಘಟಕರು ದೃಢಪಡಿಸಿದ್ದಾರೆ.
ಮಹಾರಾಷ್ಟ್ರದ ನಿವಾಸಿ ನಾರಾಯಣನ್ ಅಯ್ಯರ್ (52 ವರ್ಷ) ಅವರು ಭಾರತ- ನೇಪಾಳ ಗಡಿಯಲ್ಲಿರುವ ವಿಶ್ವದ ಮೂರನೇ ಅತಿ ಎತ್ತರದ ಪರ್ವತ ಶಿಖರವಾದ ಕಾಂಚನಜುಂಗಾ ಏರುವಾಗ 8,200 ಮೀಟರ್ ಎತ್ತರದಲ್ಲಿ ನಿಧನರಾದರು. ಪರ್ವತ ಪ್ರದೇಶಗಳಲ್ಲಿ ಹವಾಮಾನ ವ್ಯತ್ಯಾಸದಿಂದ ಕಾಡುವ ಅನಾರೋಗ್ಯಕ್ಕೊಳಗಾಗಿ ಅವರು ಸಾವನ್ನಪ್ಪಿದ್ದಾರೆ.
ಪರ್ವತವನ್ನು ಹತ್ತುವಾಗ ಅನಾರೋಗ್ಯಕ್ಕೆ ಒಳಗಾದರು, ನಾವು ಇಳಿಯುವಂತೆ ಕೇಳಿಕೊಂಡರೂ ಆರೋಹಿ ಇಳಿಯಲು ನಿರಾಕರಿಸಿದರು. ಅವರ ನಿಧನ ದುರಾದೃಷ್ಟಕರ ಎಂದು ದಂಡಯಾತ್ರೆಯ ಸಂಘಟಕ ಪಯೋನೀರ್ ಅಡ್ವೆಂಚರ್‌ನ ಕಾರ್ಯನಿರ್ವಾಹಕ ನಿರ್ದೇಶಕ ನಿವೇಶ್ ಕರ್ಕಿ ಹೇಳಿದ್ದಾರೆ.
ಕಾಂಚನಜುಂಗಾ ಪರ್ವತದಲ್ಲಿ ಈ ಋತುವಿನಲ್ಲಿ ಇದು ಮೊದಲ ಅಪಘಾತವಾಗಿದೆ. ಡೆತ್ ಝೋನ್ ಎಂದು ವರ್ಣಿಸಲಾದ ಎತ್ತರದಿಂದ ಅಯ್ಯರ್ ಅವರ ದೇಹವನ್ನು ಹೊರತೆಗೆಯಲು ಸಂಘಟಕರು ಪ್ರಯತ್ನಿಸುತ್ತಿದ್ದಾರೆ.
ಈ ಋತುವಿನಲ್ಲಿ ನಾಲ್ವರು ಭಾರತೀಯರು ಸೇರಿದಂತೆ ಇತರ ಆರು ಪರ್ವತಾರೋಹಿಗಳು ಪರ್ವತದ ಶಿಖರವನ್ನು ಯಶಸ್ವಿಯಾಗಿ ಏರಿದ್ದಾರೆ. ಮತ್ತು ಈಗ ಮೇಲ್ಭಾಗದ ಶಿಬಿರದಿಂದ ಮೂಲ ಶಿಬಿರಕ್ಕೆ ಇಳಿಯುತ್ತಿದ್ದಾರೆ. ಯಶಸ್ವಿಯಾಗಿ ಶಿಖರವನ್ನು ಏರಿದ ನಾಲ್ವರು ಭಾರತೀಯ ಆರೋಹಿಗಳೆಂದರೆ ಭಗವಾನ್ ಭಿಕೋಬಾ ಚಾವ್ಲೆ(39), ಮನೀಶಾ ರಿಷಿ ಗೈಂಡ್ (47), ಪಂಕಜ್ ಕುಮಾರ್ (21), ಮತ್ತು ಪ್ರಿಯಾಂಕಾ ಮಂಗೇಶ್ ಮೋಹಿತೆ (29). ನೇಪಾಳವು ಈ ಋತುವಿನಲ್ಲಿ 68 ವಿದೇಶಿ ಪರ್ವತಾರೋಹಿಗಳಿಗೆ 28,169 ಅಡಿ ಎತ್ತರದ ಕಾಂಚನಜುಂಗಾ ಏರಲು ಅನುಮತಿ ನೀಡಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ