ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ನೌಕಾಪಡೆಗೆ ವಿಮಾನ ನಾಶಕ ಜಲಾಂತರ್ಗಾಮಿ ವಿರೋಧಿ ನೌಕೆಯ ಶ್ರೇಣಿಯಲ್ಲಿ ಎರಡನೇ ನೌಕೆಯಾಗಿರುವ ‘ಆಂದ್ರೋತ್’ ನೌಕೆ ವಿಶಾಖಪಟ್ಟಣದಲ್ಲಿ ಅಧಿಕೃತವಾಗಿ ನೌಕಾಪಡೆಗೆ ಸೇರ್ಪಡೆಗೊಂಡಿತು.
ಸಮಾರಂಭದ ಅಧ್ಯಕ್ಷತೆಯನ್ನು ವೈಸ್ ಅಡ್ಮಿರಲ್ ರಾಜೇಶ್ ಪೆಂಧಾರ್ಕರ್ ವಹಿಸಿದ್ದರು. ಆಂದ್ರೋತ್ ನೌಕೆಯ ಸೇರ್ಪಡೆಯು ನೌಕಾಪಡೆಯ ಸಾಮರ್ಥ್ಯ ವೃದ್ಧಿಗೆ ಇನ್ನೊಂದು ಹೆಜ್ಜೆಯಾಗಿದೆ. ವಿಶೇಷವಾಗಿ ಕರಾವಳಿ ಜಲಗಳಲ್ಲಿ ಎದುರಾಗುವ ಜಲಾಂತರ್ಗಾಮಿ ಬೆದರಿಕೆಯನ್ನು ತಡೆಯುವಲ್ಲಿ ಇದರ ಪಾತ್ರ ಮಹತ್ವದ್ದಾಗಿರಲಿದೆ.
ಕೋಲ್ಕತ್ತದ ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ ಆ್ಯಂಡ್ ಎಂಜಿನಿಯರ್ಸ್ ಸಂಸ್ಥೆಯು ಈ ನೌಕೆಯನ್ನು ನಿರ್ಮಿಸಿದ್ದು, ಇದು ದೇಶೀಯ ನೌಕಾ ತಂತ್ರಜ್ಞಾನದ ಬೆಳವಣಿಗೆಗೆ ಸಾಕ್ಷಿಯಾಗಿದೆ. ಇದರ ನಿರ್ಮಾಣದಲ್ಲಿ ಶೇಕಡ 80 ಕ್ಕಿಂತ ಹೆಚ್ಚು ದೇಶೀಯ ಅಂಶ ಒಳಗೊಂಡಿದೆ. ಭದ್ರತಾ ತಂತ್ರಜ್ಞಾನದಲ್ಲಿ ಭಾರತ ಸ್ವಾವಲಂಬನೆ ಸಾಧಿಸುತ್ತಿರುವುದಕ್ಕೆ ಆಂದ್ರೋತ್ ನೌಕೆ ಉದಾಹರಣೆ ಎನ್ನಬಹುದು. ನೌಕಾಪಡೆಯ ಹೆಮ್ಮೆಯ ಈ ಹೊಸ ಸೇರ್ಪಡೆ ಮೂಲಕ ನೌಕಾ ರಕ್ಷಣಾ ಸಾಮರ್ಥ್ಯಕ್ಕೆ ಹೊಸ ಬಲ ದೊರಕಿದೆ.