ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಏಷ್ಯಾ ಸಂಘರ್ಷದ ನಡುವೆಯೂ ಭಾರತದಲ್ಲಿ ಅಡುಗೆ ಅನಿಲ ಪೂರೈಕೆ ಸ್ಥಿರ ಮತ್ತು ಸಮರ್ಪಕವಾಗಿದೆ ಎಂದು ಭಾರತೀಯ ತೈಲ ನಿಗಮ ಹೇಳಿಕೆಯಲ್ಲಿ ತಿಳಿಸಿದೆ.
ಗೃಹ ಬಳಕೆಯ ಅಡುಗೆ ಅನಿಲ ಪೂರೈಕೆ ನಿರಂತರವಾಗಿ ನಡೆಯುತ್ತಿದ್ದು, ಪ್ರಸ್ತುತ ಪ್ರತಿದಿನ ಸುಮಾರು 28 ಲಕ್ಷ ಎಲ್ ಪಿಜಿ ಸಿಲಿಂಡರ್ಗಳನ್ನು ವಿತರಿಸಲಾಗುತ್ತಿದೆ. ಇದು ಈಗಿನ ಭೌಗೋಳಿಕ, ರಾಜಕೀಯ ಉದ್ವಿಗ್ನತೆಗಳು ಪ್ರಾರಂಭವಾಗುವ ಮೊದಲು ಇದ್ದ ಸಾಮಾನ್ಯ ವಿತರಣಾ ಮಟ್ಟಕ್ಕೆ ಅನುಗುಣವಾಗಿದೆ.
ಎಲ್ ಪಿಜಿ ಮರುಪೂರಣಗಳನ್ನು ಬುಕಿಂಗ್ ಮಾಡಲು SMS ಮತ್ತು IVRS ನಂತಹ ಡಿಜಿಟಲ್ ವಿಧಾನಗಳನ್ನು ಬಳಸಲು ತೈಲ ನಿಗಮ, ಗ್ರಾಹಕರನ್ನು ಪ್ರೋತ್ಸಾಹಿಸುತ್ತಿದ್ದು, ಸುಮಾರು 87 ಪ್ರತಿಶತ ಬುಕಿಂಗ್ಗಳನ್ನು ಡಿಜಿಟಲ್ ಪ್ಲಾಟ್ಫಾರ್ಮ್ಗಳ ಮೂಲಕ ಸ್ವೀಕರಿಸಲಾಗುತ್ತಿದೆ ಎಂದು ನಿಗಮ ತಿಳಿಸಿದೆ. ಕೆಲವು ಎಲ್ ಪಿಜಿ ವಿತರಕರ ದುಷ್ಕೃತ್ಯಗಳ ವರದಿಗಳನ್ನು ಸಾಮಾಜಿಕ ಮಾಧ್ಯಮ ಮತ್ತು ಗ್ರಾಹಕರ ದೂರುಗಳ ಮೂಲಕ ಗಮನಿಸಲಾಗಿದೆ.
ಕಾಳಸಂತೆ ನಿಗ್ರಹಿಸಲು ಎಲ್ ಪಿಜಿ ವಿತರಕರ ದಿಢೀರ್ ತಪಾಸಣೆ ನಡೆಸಲು ತಂಡಗಳನ್ನು ನಿಯೋಜಿಸಲಾಗಿದೆ. ಈವರಗೆ 7 ಸಾವಿರದ 500 ಕ್ಕೂ ಹೆಚ್ಚು ತಪಾಸಣೆಗಳನ್ನು ನಡೆಸಲಾಗಿದೆ ಮತ್ತು 141 ಎಲ್ ಪಿಜಿ ವಿತರಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ನಿಗಮ ಹೇಳಿದೆ.



